ADVERTISEMENT

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ 12 ಅಧಿಕಾರಿಗಳಿಗೆ ಕ್ವಾರಂಟೈನ್‌

ಪಿಟಿಐ
Published 24 ಮೇ 2021, 9:47 IST
Last Updated 24 ಮೇ 2021, 9:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಇಸ್ಲಾಮಾಬಾದ್: ಇಲ್ಲಿನ ಭಾರತದ ಹೈಕಮಿಷನ್‌ ಕಚೇರಿಯ 12 ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಪ್ರತ್ಯೇಕವಾಗಿ ವಾಸಿಸುವಂತೆ ಪಾಕಿಸ್ತಾನ ಸೂಚಿಸಿದೆ.

ಕಳೆದ ವಾರ ಭಾರತದಿಂದ ಇವರೆಲ್ಲರೂ ಪಾಕಿಸ್ತಾನಕ್ಕೆ ಬಂದಿದ್ದರು. ಇವರಲ್ಲಿ ಒಬ್ಬರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದರಿಂದ ಪಾಕಿಸ್ತಾನ ಈ ಸೂಚನೆ ನೀಡಿದೆ.

’ಅಧಿಕಾರಿಗಳು ತಮ್ಮ ಕುಟುಂಬದ ಜತೆ ಮೇ22 ರಂದು ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದರು‘ ಎಂದು ವಿದೇಶಾಂಗ ಕಚೇರಿ ವಕ್ತಾರ ಜಾಹೀದ್ ಹಫೀಜ್ ಚೌಧರಿ ಭಾನುವಾರ ಹೇಳಿದ್ದಾರೆ.

ADVERTISEMENT

’ಎಲ್ಲರೂ ಕೋವಿಡ್‌ ನೆಗೆಟಿವ್‌ ವರದಿ ತಂದಿದ್ದರು. ಆದರೆ, ಸುರಕ್ಷತೆಯ ದೃಷ್ಟಿಯಿಂದ ಮತ್ತೆ ಪರೀಕ್ಷೆ ಮಾಡಲಾಯಿತು. ಅದರಲ್ಲಿ ಅಧಿಕಾರಿಯೊಬ್ಬರ ಪತ್ನಿಗೆ ಕೋವಿಡ್‌ ಪಾಸಿಟಿವ್‌ ವರದಿ ಬಂದಿತು‘ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವು (ಎನ್‌ಸಿಒಸಿ) ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ಕುಟುಂಬ ಸಮೇತ ಕ್ವಾರೆಂಟೈನ್‌ಗೆ ಒಳಪಡುವಂತೆ ಸೂಚಿಸಿತು.

’ಕೇಂದ್ರವು ನೀಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತದ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.