ಬಾಂಬ್ ಬೆದರಿಕೆ
(ಸಾಂದರ್ಭಿಕ ಚಿತ್ರ)
ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಪೊಲೀಸ್ ಸಹಾಯಕ ಆಯುಕ್ತ ಸೇರಿ ಒಟ್ಟು 4 ಮಂದಿ ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ.
ಅಫ್ಗಾನಿಸ್ತಾನದ ಗಡಿ ಸಮೀಪದ ಬುಡಕಟ್ಟು ಜಿಲ್ಲೆ ಬಜೌರ್‌ನ ಖರ್ ತೆಹಸಿಲ್‌ನ ಮೇಳ ಮೈದಾನದ ಸಮೀಪ ಬಾಂಬ್ ಸ್ಫೋಟ ಸಂಭವಿಸಿದೆ. ಬಜೌರ್ ಜಿಲ್ಲೆಯ ನವಗಾಯ್ ತೆಹ್ಸಿಲ್‌ನ ಸಹಾಯಕ ಆಯುಕ್ತ ಫೈಸಲ್ ಸುಲ್ತಾನ್ ಅವರನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲಾಗಿದೆ.
ಸಹಾಯ ಇನ್‌ಸ್ಪೆಕ್ಟರ್ ನೂರ್ ಹಕೀಮ್, ತಹಶೀಲ್ದಾರ್ ವಕೀಲ್ ಖಾನ್ ಹಾಗೂ ಕಾನ್‌ಸ್ಟೇಬಲ್ ರಶೀದ್ ಖಾನ್ ಮೃತ ಇತರರು.
ಭದ್ರತಾ ಪಡೆಗಳು ಕೂಡಲೇ ಸ್ಥಳವನ್ನು ಸುತ್ತುವರಿದು ಶೋಧಕಾರ್ಯಾಚರಣೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿಯ ಸಲಹೆಗಾರ ಬ್ಯಾರಿಸ್ಟರ್ ಸೈಫ್ ದಾಳಿಯನ್ನು ಖಂಡಿಸಿದ್ದು, ಇದೊಂದು ಭೀಕರ ಘಟನೆ ಎಂದಿದ್ದಾರೆ.
ಸಹಾಯಕ ಆಯುಕ್ತ ಸೇರಿ ಇತರರ ಅಮೂಲ್ಯ ಜೀವ ಹಾನಿಯಾಗಿದ್ದು ದುಃಖರ ವಿಷಯ. ಸಮಾಜ ವಿರೋಧಿ ಶಕ್ತಿಗಳನ್ನು ಮೇಲುಗೈ ಸಾಧಿಸಲು ಅನುಮತಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಅಲಿ ಅಮಿನ್ ಆದೇಶಿಸಿದ್ದು, ಗಾಯಗೊಂಡವರಿಗೆ ತಕ್ಷಣವೇ ವೈದ್ಯಕೀಯ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ಆದೇಶಿಸಿದ್ದಾಗಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.