ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು ಚೀನಾದ ಪ್ರಧಾನಿ (ಪ್ರೀಮಿಯರ್) ಲಿ ಕಿಯಾಂಗ್ ಅವರನ್ನು ಗುರುವಾರ ಬೀಜಿಂಗ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಾರ್ವಕಾಲಿಕ ಕಾರ್ಯತಂತ್ರದ ಸಹಕಾರ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಚರ್ಚೆ ನಡೆಯಿತು ಎಂದು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿದೆ.
ಐದು ಹೊಸ ಕಾರಿಡಾರ್‌ಗಳನ್ನು ಒಳಗೊಂಡ ಚೀನಾ–ಪಾಕಿಸ್ತಾನ ಎಕನಾಮಿಕ್ ಕಾರಿಡಾರ್(ಸಿಪಿಇಸಿ 2.0)ನ ಮುಂದಿನ ಹಂತವನ್ನು ಮುಂದುವರಿಸುವ ತೀರ್ಮಾನ ಕೈಗೊಂಡು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
‘ಪಾಕಿಸ್ತಾನದ ಪ್ರಾದೇಶಿಕ ಏಕತೆ, ಸಾರ್ವಭೌಮತೆ ಮತ್ತು ಸಾಮಾಜಿಕ–ಆರ್ಥಿಕ ಪ್ರಗತಿಗೆ ಸಹಕಾರ ನೀಡುತ್ತಿರುವ ಚೀನಾದ ನಾಯಕತ್ವಕ್ಕೆ ನನ್ನ ತುಂಬುಹೃದಯದ ಧನ್ಯವಾದ. ಷಿ ಜಿನ್‌ಪಿಂಗ್ ನಾಯಕತ್ವದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಭವಿಷ್ಯದಲ್ಲಿ ಇನ್ನಷ್ಟು ಸದೃಢಗೊಳಿಸಲು ನಾವು ಬಯಸುತ್ತೇವೆ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಇದೇ ವೇಳೆ ಹೇಳಿದ್ದಾರೆ.
ಶೆಹಬಾಜ್ ಶರೀಫ್ ಅವರು ಶನಿವಾರ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು 6 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದರು. ಬುಧವಾರ ಚೀನಾ ಹಮ್ಮಿಕೊಂಡಿದ್ದ ಜಪಾನ್ ವಿರುದ್ಧದ ಗೆಲುವಿನ 80ನೇ ವಿಜಯೋತ್ಸವ ಪರೇಡ್‌ನಲ್ಲೂ ಶರೀಫ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.