ADVERTISEMENT

ಅಫ್ಗಾನಿಸ್ತಾನ | ಪಾಕ್‌ನ ವೈಮಾನಿಕ ದಾಳಿಯಲ್ಲಿ 8 ಮಂದಿ ಸಾವು: ತಾಲಿಬಾನ್ ಆಡಳಿತ

ಪಿಟಿಐ
Published 18 ಮಾರ್ಚ್ 2024, 13:06 IST
Last Updated 18 ಮಾರ್ಚ್ 2024, 13:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಇಸ್ಲಾಮಾಬಾದ್‌: ‘ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನವು ಸೋಮವಾರ ವೈಮಾನಿಕ ದಾಳಿ ನಡೆಸಿದ್ದು, ಮೂವರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್‌ ಆಡಳಿತ ತಿಳಿಸಿದೆ.

ಅಫ್ಗಾನಿಸ್ತಾನದ ಪಕ್ತಿಕ ಮತ್ತು ಖೋಸ್ಟ್ ಪ್ರಾಂತ್ಯ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ವೈಮಾನಿಕ ದಾಳಿ ನಡೆದಿರುವ ಬಗ್ಗೆ ಅಫ್ಗಾನಿಸ್ತಾನ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ADVERTISEMENT

‘ಮುಂಜಾನೆ 3 ಗಂಟೆಯ ವೇಳೆಗೆ ಪಾಕಿಸ್ತಾನದ ಯುದ್ಧವಿಮಾನಗಳು ನಾಗರಿಕರ ಮನೆಗಳ ಮೇಲೆ ದಾಳಿ ನಡೆಸಿವೆ ಎಂದು ಅಫ್ಗಾನ್‌ ಸರ್ಕಾರದ ವಕ್ತಾರ ಝಬಿವುಲ್ಲ ಮುಜಾಹಿದ್‌ ಹೇಳಿಕೆ ನೀಡಿದ್ದಾರೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಸಾಮಾನ್ಯ ಜನರ ಮನೆಗಳನ್ನೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಪಕ್ತಿಕದಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಖೋಸ್ಟ್‌ನಲ್ಲಿ ಒಂದು ಮನೆ ಸಂಪೂರ್ಣ ನಾಶವಾಗಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ‘ ಎಂದು ಆರೋಪಿಸಿದ್ದಾರೆ.

‘ಪಾಕಿಸ್ತಾನವು ಹಿಂಸಾತ್ಮಕ ಚಟುವಟಿಕೆಗಳ ನಿಯಂತ್ರಣದ ವೈಫಲ್ಯ ಮತ್ತು ಸಮಸ್ಯೆಗಳಿಗೆ ಅಫ್ಗಾನಿಸ್ತಾನವನ್ನು ಹೊಣೆಗಾರರನ್ನಾಗಿಸುವುದನ್ನು ನಿಲ್ಲಿಸಬೇಕು. ಇಂತಹ ಕೃತ್ಯಗಳು ಪಾಕಿಸ್ತಾನದ ಹಿಡಿತಕ್ಕೆ ಸಿಗದ ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು’ ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ಉತ್ತರ ವಾಜಿರಿಸ್ತಾನ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಅಧ್ಯಕ್ಷ ಆಸೀಫ್‌ ಅಲಿ ಜರ್ದಾರಿ ಹೇಳಿಕೆ ನೀಡಿದ ಮರುದಿನವೇ ದಾಳಿ ನಡೆದಿದೆ.

‘8 ಉಗ್ರರನ್ನು ನರಕಕ್ಕೆ ಕಳುಹಿಸಲಾಗಿದೆ’

ಇಸ್ಲಾಮಾಬಾದ್‌: ಖೈಬರ್‌ ಪಖ್ತುಂಖ್ವ ಪ್ರಾಂತ್ಯದ ಬುಡಕಟ್ಟು ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಲವು ‌ಪ್ರಕರಣಗಳಲ್ಲಿ ಬೇಕಾಗಿದ್ದ ಭಯೋತ್ಪಾದಕ ಕಮಾಂಡರ್‌ ಸೇರಿದಂತೆ 8 ಉಗ್ರರನ್ನು ನರಕಕ್ಕೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಸೋಮವಾರ ತಿಳಿಸಿದೆ.

ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ ಎಂದು ಅಫ್ಗಾನ್ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಹೇಳಿಕೆ ನೀಡಿದೆ.

‘ಗುಪ್ತಚರ ಮಾಹಿತಿಯ ಆಧಾರದಲ್ಲಿ ಮಾರ್ಚ್ 17 ಮತ್ತು 18ರ ರಾತ್ರಿ ಕಾರ್ಯಾಚರಣೆ ನಡೆಸಲಾಗಿದ್ದು ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 8 ಜನ ಭಯೋತ್ಪಾದಕರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.