ADVERTISEMENT

ಋತುಸ್ರಾವವಾಗಿದ್ದರಿಂದ 14ರ ಬಾಲಕಿ ವಿವಾಹ ಮಾನ್ಯ

ಸಿಂಧ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ‘ಸುಪ್ರೀಂ’ ಮೊರೆ

ಪಿಟಿಐ
Published 8 ಫೆಬ್ರುವರಿ 2020, 17:55 IST
Last Updated 8 ಫೆಬ್ರುವರಿ 2020, 17:55 IST

ಕರಾಚಿ: ‘ಅಪಹರಣಕ್ಕೊಳಗಾಗಿ ಬಳಿಕ ಅಪಹರಣಕಾರರಿಂದ ಬಲವಂತವಾಗಿ ಮತಾಂತರಗೊಂಡು ಮದುವೆಯಾಗಿದ್ದ 14 ವರ್ಷದ ಕ್ರೈಸ್ತ ಬಾಲಕಿಯ ಪೋಷಕರು ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

‘ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಮೊದಲ ಋತುಸ್ರಾವ ಆಗಿರುವುದರಿಂದಾಗಿ ಅಪಹರಣಕಾರ ಅಬ್ದುಲ್ ಜಬ್ಬಾರ್ ಜತೆಗಿನ ಆಕೆಯ ವಿವಾಹಕ್ಕೆ ಮಾನ್ಯತೆ ಇದೆ’ ಎಂದು ಷರಿಯಾ ಕಾನೂನು ಉಲ್ಲೇಖಿಸಿ ಸಿಂಧ್ ಹೈಕೋರ್ಟ್ ಇದೇ 3ರಂದು ತೀರ್ಪು ನೀಡಿತ್ತು.

ಬಾಲಕಿಯ ಪೋಷಕರ ಪರ ವಕೀಲ ತಬಸ್ಸುಂ ಯೂಸುಫ್ ಈ ಕುರಿತು ಪ್ರತಿಕ್ರಿಯಿಸಿದ್ದು, ‘ಸಿಂಧ್ ಹೈಕೋರ್ಟ್‌ ನೀಡಿರುವ ತೀರ್ಪು, ಸಿಂಧ್ ಬಾಲ್ಯವಿವಾಹ ತಡೆ ಕಾಯ್ದೆಗೆ
ಅನುಗುಣವಾಗಿಲ್ಲ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದಿದ್ದಾರೆ.

ADVERTISEMENT

18ಕ್ಕಿಂತ ಕಡಿಮೆ ವಯಸ್ಸಿನ ಅಲ್ಪಸಂಖ್ಯಾತ ಬಾಲಕಿಯರ (ಪ್ರಮುಖವಾಗಿ ಹಿಂದೂ, ಕ್ರೈಸ್ತ ಧರ್ಮದವರು) ವಿವಾಹ ತಡೆಗಟ್ಟುವ ಸಲುವಾಗಿ 2014ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ.

ಮಗಳನ್ನು ಭೇಟಿ ಮಾಡಬೇಕೆಂದು ಪೋಷಕರು ಸಿಂಧ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ಬಳಿಕ, ಆಕೆಯ ವಯಸ್ಸು ದೃಢಪಡಿಸಲುಪೊಲೀಸರು ಪರೀಕ್ಷೆ ನಡೆಸಬೇಕೆಂದು ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ.

‘ಕಳೆದ ಅಕ್ಟೋಬರ್‌ನಲ್ಲಿ ಅಪಹರಣವಾದಾಗ ಹುಮಾ ವಯಸ್ಸು 14. ಇದನ್ನು ಸಾಬೀತುಪಡಿಸಲು ಚರ್ಚ್‌ ಹಾಗೂ ಶಾಲಾ ದಾಖಲೆಗಳನ್ನು ಆಕೆಯ ಪೋಷಕರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ತನಿಖಾಧಿಕಾರಿಗಳು ಅಪಹರಣಕಾರ ಅಬ್ದುಲ್ ಜಬ್ಬಾರ್ ಹಾಗೂ ಅವರ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ. ಆಕೆಯ ವಯಸ್ಸನ್ನು ಸುಳ್ಳಾಗಿ ತೋರಿಸಿ ಪತಿಯ ಜತೆಗೆ ಕಳುಹಿಸಿಬಿಡಬಹುದು ಎಂದು ಪೋಷಕರು ಭೀತಿಗೊಂಡಿದ್ದಾರೆ’ ಎಂದು ವಕೀಲ ತಬಸ್ಸುಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.