ADVERTISEMENT

ಎಚ್ಚರಿಕೆಯಿಂದ ವರ್ತಿಸಿ: ಭಾರತಕ್ಕೆ ಪಾಕ್‌ ಎಚ್ಚರಿಕೆ

ಪಿಟಿಐ
Published 27 ಜುಲೈ 2023, 14:53 IST
Last Updated 27 ಜುಲೈ 2023, 14:53 IST
ನಿಲ್ಲದ ಭಾರತ–ಪಾಕ್‌ ವಾಕ್ಸಮರ
ನಿಲ್ಲದ ಭಾರತ–ಪಾಕ್‌ ವಾಕ್ಸಮರ   

ಇಸ್ಲಾಮಾಬಾದ್‌ : ‘ಭಾರತವು ತನ್ನ ಘನತೆ, ಗೌರವಗಳ ರಕ್ಷಣೆಗಾಗಿ ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ)ಯನ್ನೂ ದಾಟಲಿದೆ’ ಎಂಬ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿಕೆಗೆ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸಿದ್ದು, ‘ಯುದ್ಧೋನ್ಮಾದವು ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಭಂಗ ತರಲಿದೆ’ ಎಂದು ಹೇಳಿದೆ.  

‘ಯಾವುದೇ ಆಕ್ರಮಣದ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಪಾಕಿಸ್ತಾನ ಸಮರ್ಥವಾಗಿದೆ. ಪ್ರಾದೇಶಿಕ ಸ್ಥಿರತೆ, ಶಾಂತಿಗೆ ಯುದ್ಧೋನ್ಮಾದ ಭಂಗ ತರುತ್ತದೆ. ದಕ್ಷಿಣ ಏಷ್ಯಾದ ರಕ್ಷಣಾ ಕಾರ್ಯತಂತ್ರದ ವಾತಾವರಣವನ್ನು ಅಸ್ಥಿರಗೊಳಿಸಲಿದೆ. ಹೀಗಾಗಿ ಭಾರತ ಎಚ್ಚರಿಕೆಯಿಂದ ವರ್ತಿಸಬೇಕು’ ಎಂದು ಬುಧವಾರ ವಿದೇಶಾಂಗ ಇಲಾಖೆ  ಹೇಳಿಕೆಯಲ್ಲಿ ತಿಳಿಸಿದೆ. 

ಪಾಕಿಸ್ತಾನ, ಕಾಶ್ಮೀರ ಮತ್ತು ಗಿಲ್ಗಿಟ್‌–ಬಾಲ್ಟಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತದ ಸಚಿವರು ಮತ್ತು ಮಿಲಿಟರಿಯ ಹಿರಿಯ ಅಧಿಕಾರಿಗಳು ಇಂಥ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ ಎಂದೂ ಪಾಕಿಸ್ತಾನ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. 

ADVERTISEMENT

24ನೇ ವರ್ಷದ ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ಬುಧವಾರ ಲಡಾಕ್‌ನಲ್ಲಿ ನಡೆದ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜನಾಥ ಸಿಂಗ್‌, ‘ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಘನತೆ, ಗೌರವಗಳ ರಕ್ಷಣೆಗೆ ನಾವು ಯಾವ ಹಂತಕ್ಕಾದರೂ ಹೋಗುತ್ತೇವೆ. ನಮ್ಮನ್ನು ಕೆಣಕಿದರೆ ನಾವು ಗಡಿ ನಿಯಂತ್ರಣಾ ರೇಖೆ ದಾಟಿ ಬರಲಿದ್ದೇವೆ’ ಎಂದು ರಾಜನಾಥ ಸಿಂಗ್‌ ಗುಡುಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.