ಪಾಕ್- ಭಾರತ ಧ್ವಜ
ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಗುರುವಾರ ಭಾರತೀಯ ಹೈಕಮಿಷನ್ ಸಿಬ್ಬಂದಿಯೊಬ್ಬರನ್ನು ಹೊರಹಾಕಿರುವುದಾಗಿ ಘೋಷಿಸಿದೆ.
ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಅಧಿಕಾರಿಯೊಬ್ಬರನ್ನು ಬುಧವಾರ ಭಾರತ ಹೊರಹಾಕಿತ್ತು. ಅವರಿಗೆ ಭಾರತವನ್ನು ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿತ್ತು. ಮೇ 13ರಂದು, ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಭಾರತ ಮತ್ತೊಬ್ಬ ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿತ್ತು.
ಭಾರತದ ಕ್ರಮದ ನಂತರ, ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸಿಬ್ಬಂದಿಯನ್ನು ಸಹ ಹೊರಹಾಕಿದೆ.
ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್‌ನ ಸಿಬ್ಬಂದಿಯೊಬ್ಬರು ತಮ್ಮ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಅವರನ್ನು ಹೊರಹಾಕಲಾಗಿದ್ದು, 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ನಿರ್ದೇಶಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.
ಭಾರತೀಯ ಹೈಕಮಿಷನ್‌ನ ಯಾವುದೇ ರಾಜತಾಂತ್ರಿಕರು ಅಥವಾ ಸಿಬ್ಬಂದಿ ತಮ್ಮ ಸವಲತ್ತುಗಳು ಮತ್ತು ಸ್ಥಾನಮಾನವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಪಾಕಿಸ್ತಾನ ಹೇಳಿಕೆಯಲ್ಲಿ ತಿಳಿಸಿದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರಿಂದ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂಧೂರ' ಅಡಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸಿತ್ತು. ಇದರಲ್ಲಿ ನೂರಾರು ಉಗ್ರರನ್ನು ಕೊಂದಿತ್ತು.
ನಂತರ, ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಬಳಿಕ, ಭಾರತೀಯ ಪಡೆಗಳು ಪಾಕಿಸ್ತಾನದ ಹಲವು ಸೇನಾ ನೆಲೆಗಳ ಮೇಲೆ ಉಗ್ರ ಪ್ರತಿದಾಳಿ ನಡೆಸಿದ್ದವು.
ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಉಭಯ ದೇಶಗಳು ಯುದ್ಧ ವಿರಾನಕ್ಕೆ ಸಮ್ಮತಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.