ಇಸ್ಲಮಾಬಾದ್: ‘ಭಾರತದೊಂದಿಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಆ ದೇಶಕ್ಕೆ ಬೇಕಿರುವ ವ್ಯಕ್ತಿಗಳನ್ನು ಹಸ್ತಾಂತರ ಮಾಡುವಲ್ಲಿ ಪಾಕಿಸ್ತಾನದ ಯಾವುದೇ ಆಕ್ಷೇಪಗಳಿಲ್ಲ’ ಎಂದು ವಿದೇಶಾಂಗ ಇಲಾಖೆ ಮಾಜಿ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.
ಅಲ್ ಜಝೀರಾ ಸುದ್ದಿ ವಾಹಿನಿಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷರೂ ಆದ ಬಿಲಾವಲ್, ಲಷ್ಕರ್ – ಇ –ತೈಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಜೈಶ್ – ಇ –ಮಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಹಸ್ತಾಂತರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ‘ಇದೊಂದು ಸಂಭವನೀಯ ಸಮ್ಮತಿ ಮತ್ತು ಭಾರತದೊಂದಿಗಿನ ಉತ್ತಮ ನಂಬಿಕೆಯ ಸ್ನೇಹಪೂರ್ವಕ ನಡೆ ಎಂದು ಭಾವಿಸಿದ್ದೇನೆ’ ಎಂದು ಉತ್ತರಿಸಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ಎರಡೂ ಕಡೆಯ ಭೇಟಿಯಲ್ಲಿ ಭಯೋತ್ಪಾದನೆಯೇ ಚರ್ಚೆಯ ಪ್ರಧಾನ ವಿಚಾರವಾಗಿರುವಾಗ ಈ ಅಂಶವನ್ನು ಪಾಕಿಸ್ತಾನ ವಿರೋಧಿಸುವುದಿಲ್ಲ ಎಂದು ಖಚಿತವಾಗಿ ಹೇಳಬಲ್ಲೆ’ ಎಂದಿದ್ದಾರೆ.
‘ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದಾನೆ. ಸಯೀದ್ ಬಂಧಿಯಾಗಿದ್ದಾನೆ. ಇಬ್ಬರ ಮೇಲೂ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಗಳಿವೆ. ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಶಿಕ್ಷೆಗೆ ಗುರಿಪಡಿಸಲು ಭಾರತದಿಂದ ಅಗತ್ಯ ಸಾಕ್ಷ್ಯ ಬೇಕಿದೆ. ಈ ಸಾಕ್ಷ್ಯಗಳನ್ನು ಭಾರತ ಇಲ್ಲಿನ ನ್ಯಾಯಾಲಯಕ್ಕೆ ಒದಗಿಸಿದರೆ ಶಿಕ್ಷೆಗೆ ಗುರಿಪಡಿಸಲು ಮತ್ತು ಹಸ್ತಾಂತರಕ್ಕೆ ಅಡ್ಡಿ ಎದುರಾಗದು’ ಎಂದು ಬಿಲಾವಲ್ ಹೇಳಿದ್ದಾರೆ.
‘ಸಯೀದ್ ಪಾಕಿಸ್ತಾನದಲ್ಲಿ ಬಂಧಿತನಾಗಿದ್ದಾನೆ. ಮಸೂದ್ ಅಜರ್ ಅಫ್ಗಾನಿಸ್ತಾನದಲ್ಲಿ ಇರಬಹುದು. ಪಾಕ್ ನೆಲದಲ್ಲಿರುವ ಬಗ್ಗೆ ಭಾರತ ಮಾಹಿತಿ ಕೊಟ್ಟ ದಿನವೇ ಬಂಧಿಸಲು ಸಿದ್ಧ’ ಎಂದು ಬಿಲಾವಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.