ADVERTISEMENT

ಪಾಕಿಸ್ತಾನಕ್ಕೆ ನಡುಕ ತಂದ ಎಪಿಜಿ ವರದಿ

ಪಿಟಿಐ
Published 7 ಅಕ್ಟೋಬರ್ 2019, 11:28 IST
Last Updated 7 ಅಕ್ಟೋಬರ್ 2019, 11:28 IST
   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಣದ ಅಕ್ರಮ ವರ್ಗಾವಣೆ ನಿಂತಿಲ್ಲ, ಉಗ್ರರಿಗೆ ಹಣಕಾಸಿನ ನೆರವು ತಪ್ಪಿಲ್ಲ ಜತೆಗೇ ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌)ಯ 40 ಸಲಹೆಗಳಲ್ಲಿ ಪಾಲನೆಯಾಗಿದ್ದು ಒಂದೇ ಸಲಹೆ ಎಂದು ಏಷ್ಯಾ ಫೆಸಿಫಿಕ್‌ ಗುಂಪು (ಎಪಿಜಿ) ತನ್ನ ವರದಿಯಲ್ಲಿ ಹೇಳಿದೆ.

‘ಪರಸ್ಪರ ಮೌಲ್ಯಮಾಪನ‘ ಎಂಬ ಹೆಸರಿನ ತನ್ನ ಬಹುನಿರೀಕ್ಷಿತ ವರದಿಯನ್ನು ಎಪಿಜಿ ಸೋಮವಾರ ಬಿಡುಗಡೆಗೊಳಿಸಿತು. 228 ಪುಟಗಳ ಈ ವರದಿಯಲ್ಲಿ ಪಾಕಿಸ್ತಾನದ ಕುರಿತ ಈ ಅಂಶಗಳು ಉಲ್ಲೇಖವಾಗಿವೆ.

ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನಕಾ ಕೃತ್ಯಕ್ಕೆ ಹಣಕಾಸಿನ ನೆರವಿನಂಥ ಚಟುವಟಿಕೆಗಳು ಪಾಕಿಸ್ತಾನದಲ್ಲಿ ಹೆಚ್ಚ ಸಕ್ರೀಯವಾಗಿದ್ದ ಹಿನ್ನೆಲೆಯಲ್ಲಿ ಇದೇ ವರ್ಷ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆಯು ಪಾಕಿಸ್ತಾವನ್ನು ‘ಬೂದು ಪಟ್ಟಿ‘ (ಗ್ರೇ ಲಿಸ್ಟ್‌)ಯಲ್ಲಿ ಸೇರಿಸಿತ್ತು. ಅಲ್ಲದೆ, ತಾನು ನೀಡುವ ಸಲಹೆಗಳನ್ನು ಇದೇ ಅಕ್ಟೋಬರ್ ಒಳಗಾಗಿ ಪಾಲಿಸಿ, ಅಕ್ರಮ ಹಣ, ಭಯೋತ್ಪಾದನೆಗೆ ಹಣಕಾಸು ನೆರವನ್ನು ತಡೆಯುವಂತೆ ತಿಳಿಸಿತ್ತು.

ADVERTISEMENT

ತಾನು ನೀಡಿರುವ 40 ಸಲಹೆಗಳನ್ನು ಪಾಕಿಸ್ತಾನ ಎಷ್ಟರ ಮಟ್ಟಿಗೆ ಪಾಲಿಸಿದೆ ಎಂಬುದನ್ನು ಪರಾಮರ್ಶೆ ನಡೆಸಿ, ಆ ದೇಶವನ್ನು ಯಾವ ಪಟ್ಟಿಗೆ ಸೇರಿಸಬೇಕು ಎಂಬುದನ್ನು ನಿರ್ಧರಿಸಲು ಹಣಕಾಸು ಕಾರ್ಯಪಡೆ ಇನ್ನು ಕೆಲವೇ ದಿನಗಳಲ್ಲಿ ಸಭೆ ಸೇರಲಿದೆ. ಪರಿಸ್ಥಿತಿ ಹೀಗಿರುವಾಗಲೇ ಎಪಿಜಿ ತನ್ನ ವರದಿ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಹಣಕಾಸು ಕಾರ್ಯಪಡೆಯ ಸಲಹೆಗಳನ್ನು ಪಾಲಿಸಿಲ್ಲ ಎಂದು ಹೇಳಿದೆ. ಅಲ್ಲದೆ, ಹಣದ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣ ಸಂದಾಯ ಚಟುವಟಿಕೆಗಳೂ ನಿಂತಿಲ್ಲ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ ನೀಡಿದ್ದ 40 ಸಲಹೆಗಳಲ್ಲಿ ಪಾಕಿಸ್ತಾನ ಪಾಲಿಸಿದ್ದು ಒಂದನ್ನು ಮಾತ್ರ. 9 ಸಲಹೆಗಳನ್ನು ಭಾಗಶಃ ಪಾಲಿಸದೆ. 26 ಸಲಹೆಗಳನ್ನು ಸ್ವಲ್ಪ ಮಟ್ಟಿಗೆ ಪಾಲಿಸಿದೆ. ಇನ್ನುಳಿದ ನಾಲ್ಕು ಸಲಹೆಗಳತ್ತ ಅದು ಗಮನವನ್ನೇ ಹರಿಸಿಲ್ಲ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಎಪಿಜಿ ವರದಿಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಹಿಂದಿನ ಬೂದು ಪಟ್ಟಿಯಲ್ಲೇ ಮುಂದುವರಿಯುವ ಸಾಧ್ಯತೆಗಳಿವೆ. ಈ ವಿಚಾರದ ಕುರಿತು ಚರ್ಚೆ ನಡೆಸುವ ಹಣಕಾಸು ಕಾರ್ಯಪಡೆಯ ಪ್ರಮುಖರ ಸಭೆಯು ಇದೇ 13ರಿಂದ 18ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.
ಪಾಕಿಸ್ತಾನದೊಂದಿಗೆ ಇರಾನ್ ಮತ್ತು ಉತ್ತರ ಕೊರಿಯಾವನ್ನೂ ಹಣಕಾಸು ಕಾರ್ಯಪಡೆ ಬೂದು ಪಟ್ಟಿಗೆ ಸೇರಿಸಿದೆ.

ಬೂದು ಪಟ್ಟಿಯಲ್ಲೇ ಉಳಿದರೆ ಆರ್ಥಿಕ ನೆರವೂ ಸಿಗದು

‘ಬೂದು ಪಟ್ಟಿ’ಗೆ ಒಂದು ರಾಷ್ಟ್ರವನ್ನು ಸೇರಿಸುವುದು ಎಂದರೆ ಆ ರಾಷ್ಟ್ರಕ್ಕೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಿಗಬಹುದಾದ ಆರ್ಥಿಕ ನೆರವಿಗೆ ಕಡಿವಾಣ ಬಿದ್ದಂತೆ. ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸುವುದರಿಂದ ಐಎಂಎಫ್‌, ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಹಾಗೂ ಯುರೋಪಿಯನ್‌ ಯೂನಿಯನ್‌ನಿಂದ (ಇಯು) ಸುಲಭವಾಗಿ ಹಣಕಾಸು ನೆರವು ಸಿಗದು. ಮೂಡೀಸ್‌, ಎಸ್‌ಆ್ಯಂಡ್‌ ಪಿ, ಫಿಚ್‌ನಂತಹ ಸಂಸ್ಥೆಗಳಿಂದ ಕಡಿಮೆ ರೇಟಿಂಗ್‌ ಬಂದರೆ ದೇಶದಲ್ಲಿ ಹೂಡಿಕೆ ಮೇಲೂ ಪರಿಣಾಮ ಬೀರುವುದು. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ, ಹಣಕಾಸು ನೆರವಿಗಾಗಿ ಅನೇಕ ರಾಷ್ಟ್ರಗಳ ಮೊರೆ ಹೋಗಿದೆ. ಆದರೆ, ಎಫ್‌ಎಟಿಎಫ್‌ನ ನಿರ್ಧಾರದಿಂದ ಇಲ್ಲಿಯೂ ಪಾಕಿಸ್ತಾನಕ್ಕೆ ತೊಂದರೆ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.