ADVERTISEMENT

ಪಾಕಿಸ್ತಾನ: ಸರ್ಕಾರ ರಚನೆ ಸರ್ಕಸ್‌– ಪ್ರಧಾನಿ ಹುದ್ದೆಗೆ ಶಾಹಬಾಝ್‌ ನಾಮಪತ್ರ

ಪಿಟಿಐ
Published 10 ಏಪ್ರಿಲ್ 2022, 20:22 IST
Last Updated 10 ಏಪ್ರಿಲ್ 2022, 20:22 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದರೂಆ ದೇಶದ ರಾಜಕೀಯ ಅನಿಶ್ಚಿತ ಸ್ಥಿತಿ ಕೊನೆಯಾಗುವಂತೆ ಕಾಣುತ್ತಿಲ್ಲ. ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಅಧ್ಯಕ್ಷ ಶಾಹಬಾಝ್‌ ಷರೀಫ್‌ ಅವರು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಶಾಹಬಾಝ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಅವಕಾಶ ಕೊಟ್ಟರೆ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷದ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷವುಭಾನುವಾರ ಹೇಳಿದೆ.

ಇಮ್ರಾನ್ ಅವರನ್ನು ಶನಿವಾರ ತಡರಾತ್ರಿ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಲಾಗಿದೆ. ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಪಾಕಿಸ್ತಾನ ಸಂಸತ್ತಿನಲ್ಲಿ ಭಾನುವಾರ ಆರಂಭಗೊಂಡಿದೆ.

ಸಮಾಜವಾದಿ, ಉದಾರವಾದಿ ಮತ್ತು ಧಾರ್ಮಿಕ ಮೂಲಭೂತವಾದಿ ಪಕ್ಷಗಳೆಲ್ಲವೂ ಇರುವ ಹಲವು ಪಕ್ಷಗಳ ಮೈತ್ರಿಕೂಟವನ್ನು ರಚಿಸಲಾಗಿದೆ. ಈ ಮೈತ್ರಿಕೂಟವು 70 ವರ್ಷದ ಶಾಹಬಾಝ್‌ ಅವರನ್ನು ಪ್ರಧಾನಿ ಹುದ್ದೆಯ ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಇಮ್ರಾನ್‌ ಅವರ ಪಿಟಿಐ, ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೆ. ಶಾಹಬಾಝ್‌ ಅವರು ಸದನದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚು.

ADVERTISEMENT

ದೇಶದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್‌ ಅಲಿ ಝರ್ದಾರಿ ಅವರ ಮಗ ಬಿಲಾವಲ್‌ ಭುಟ್ಟೊ ಅವರು ಹೊಸ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದೆ.

ಶಾಹಬಾಝ್‌ ಮತ್ತು ಅವರ ಮಗ ಹಂಝಾ ಅವರ ವಿರುದ್ಧದ 1,400 ಕೋಟಿ ಪಾಕಿಸ್ತಾನ ರೂಪಾಯಿಯ ಅಕ್ರಮ ವರ್ಗಾವಣೆ ಪ್ರಕರಣದ ತೀರ್ಪನ್ನು ಸೋಮವಾರ ಪ್ರಕಟಿಸುವುದಾಗಿ ಫೆಡರಲ್‌ ಇನ್‌ವೆಸ್ಟಿಗೇಷನ್‌ ಏಜೆನ್ಸಿಯ ವಿಶೇಷ ನ್ಯಾಯಾಲಯ ಘೋಷಿಸಿದೆ ಎಂದು ಪಿಟಿಐ ಹೇಳಿದೆ. ಶಾಹಬಾಝ್‌ ಅವರಿಗೆ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಕೊಡಬಾರದು ಎಂಬುದಕ್ಕೆ ಇಮ್ರಾನ್‌ ಅವರ ಪಕ್ಷ ಮುಂದಿಟ್ಟಿರುವ ಪ್ರಮುಖ ಕಾರಣಇದು.

ಆದರೆ, ಈ ಆರೋಪಗಳನ್ನು ಸಂಸತ್ತಿನ ಕಾರ್ಯಾಲಯವು ತಿರಸ್ಕರಿಸಿದೆ. 342 ಸದಸ್ಯ ಬಲದ ಸಂಸತ್ತಿನಲ್ಲಿ ಸರಳ ಬಹುಮತಕ್ಕೆ 172 ಸದಸ್ಯರ ಬೆಂಬಲ ಬೇಕು. ಇಮ್ರಾನ್‌ ವಿರುದ್ಧದ ಅವಿಶ್ವಾಸ ನಿರ್ಣಯದ ಪರ 174 ಸಂಸದರು ಮತ ಹಾಕಿದ್ದರು.

ದೇಶ ತೊರೆಯುವುದನ್ನು ತಡೆಯಿರಿ: ಹೈಕೋರ್ಟ್‌ಗೆ ಅರ್ಜಿ

ಇಮ್ರಾನ್‌ ಮತ್ತು ಅವರ ಸಚಿವ ಸಂಪುಟದ ಸದಸ್ಯರು ದೇಶ ಬಿಟ್ಟು ಹೋಗುವುದನ್ನು ತಡೆಯಬೇಕು ಎಂದು ಕೋರಿದ ಅರ್ಜಿಯೊಂದು ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ.

ಪಾಕಿಸ್ತಾನದ ಫೆಡರಲ್‌ ಇನ್‌ವೆಸ್ಟಿಗೇಷನ್‌ ಏಜೆನ್ಸಿಯು ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಗಳಲ್ಲಿ ತನ್ನ ಸಿಬ್ಬಂದಿಯನ್ನು ಕಟ್ಟೆಚ್ಚರದಲ್ಲಿ ಇರಿಸಿದೆ. ಇಮ್ರಾನ್‌ ಸರ್ಕಾರದಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಅಧಿಕಾರಿಗಳು, ಸಚಿವರು ವಿದೇಶಕ್ಕೆ ಹೋಗುವುದನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ‘ನಿರಾಕ್ಷೇಪಣಾ ಪತ್ರ’ ಇದ್ದರಷ್ಟೇ ದೇಶದಿಂದ ಹೊರಕ್ಕೆ ಹೋಗಲು ಸಾಧ್ಯ.

ಆಮದು ಸರ್ಕಾರವನ್ನು ಒಪ್ಪುವುದಿಲ್ಲ: ಇಮ್ರಾನ್‌

‘1947ರಲ್ಲಿ ಪಾಕಿಸ್ತಾನವು ಸ್ವತಂತ್ರ ದೇಶವಾಯಿತು; ಆದರೆ, ಸರ್ಕಾರ ಬದಲಾವಣೆಯ ವಿದೇಶಿ ಸಂಚಿನ ವಿರುದ್ಧದ ಸ್ವಾತಂತ್ರ್ಯ ಹೋರಾಟ ಇಂದು ಆರಂಭವಾಗಿದೆ. ಪೌರರೇ ದೇಶದ ಸಾರ್ವಭೌಮತೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಂಡಿದ್ದಾರೆ’ ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ. ಪದಚ್ಯುತಿಯ ಬಳಿಕ ಇದು ಅವರ ಮೊದಲ ಪ್ರತಿಕ್ರಿಯೆಯಾಗಿದೆ.

‘ಆಮದು ಸರ್ಕಾರ’ವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಶುಕ್ರವಾರ ಹೇಳಿದ್ದರು. ತಮ್ಮ ಸರ್ಕಾರವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದ ಕಾರಣಕ್ಕಾಗಿಯೇ ಸರ್ಕಾರವನ್ನು ಉರುಳಿಸಲಾಗಿದೆ ಎಂದು ಇಮ್ರಾನ್‌ ಹೇಳಿದ್ದಾರೆ. ಈ ಸಂಚಿನ ಹಿಂದೆ ಅಮೆರಿಕ ಇದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಅಮೆರಿಕ ಅಲ್ಲಗಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.