ಕರಾಚಿ: ಪಾಕಿಸ್ತಾನದ ಹೈದರಾಬಾದ್ ನಗರದಲ್ಲಿರುವ ಐತಿಹಾಸಿಕ ಶಿವ ದೇವಸ್ಥಾನಕ್ಕೆ ಸೇರಿದ 6 ಎಕರೆ ಜಾಗವನ್ನು ಅತಿಕ್ರಮಿಸಿಕೊಂಡಿರುವುದನ್ನು ವಿರೋಧಿಸಿ ಸಿಂಧ್ ಪ್ರಾಂತ್ಯದಲ್ಲಿರುವ ಹಿಂದೂ ಸಮುದಾಯದ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು.
ಹಿಂದೂ ಸಮುದಾಯದ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ಹೋರಾಡುವ ‘ಪಾಕಿಸ್ತಾನ್ ದಲಿತ್ ಇತ್ತೆಹಾದ್’ (ಪಾಕಿಸ್ತಾನ ದ್ರಾವಿಡ ಒಕ್ಕೂಟ) ಪ್ರತಿಭಟನೆಗೆ ಕರೆ ನೀಡಿತ್ತು. ಮುಸಾ ಖಾತಿಯಾನ್ ಜಿಲ್ಲೆಯ ತಂಡೊ ಜಾಮ್ ನಗರದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಈಗಾಗಲೇ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಸ್ಮಶಾನ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ಬಿಲ್ಡರ್‌ಗಳು ಕಟ್ಟಡಗಳ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ. ಇವರ ವಿರುದ್ಧ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಬಿಲ್ಡರ್‌ಗಳು ದೇವಸ್ಥಾನದ ಪ್ರವೇಶವನ್ನೂ ನಿರ್ಬಂಧಿಸಿರುವುದರಿಂದ ವಾರದ ಪ್ರಾರ್ಥನೆ ಮಾಡಲೂ ನಮಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.
‘ಇದೇ ರೀತಿ ಮುಂದುವರಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಹಾಗೂ ಹೈದರಾಬಾದ್ ನಗರದಲ್ಲೂ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.