ADVERTISEMENT

ವಿದೇಶಿ ಸಂಚಿನ ಕುರಿತು ಇಮ್ರಾನ್‌ ಖಾನ್‌ ಆರೋಪ: ಸತ್ಯಕ್ಕೆ ದೂರ ಎಂದ ಅಮೆರಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 2:38 IST
Last Updated 1 ಏಪ್ರಿಲ್ 2022, 2:38 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ವಾಷಿಂಗ್ಟನ್‌: ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕ ಪಿತೂರಿ ನಡೆಸಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ, ಇಮ್ರಾನ್‌ ಖಾನ್‌ ಮಾಡಿರುವ ಆರೋಪದಲ್ಲಿ ಸತ್ಯಾಂಶಗಳಿಲ್ಲ ಎಂದು ತಿಳಿಸಿದೆ.

‘ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪಾಕಿಸ್ತಾನದ ಸಾಂವಿಧಾನಿಕ ಪ್ರಕ್ರಿಯೆಯನ್ನು ನಾವು ಗೌರವಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಇಮ್ರಾನ್‌ ಖಾನ್‌ರ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ’ ಎಂದು ಅಮೆರಿಕದ ಸರ್ಕಾರದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಇಮ್ರಾನ್‌ ಖಾನ್‌, ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ‘ವಿದೇಶಿ ಪಿತೂರಿ’ ನಡೆದಿದೆ ಎಂದು ಹೇಳಿದ್ದಾರೆ.

ADVERTISEMENT

‘ಪಾಕಿಸ್ತಾನದ ವಿದೇಶಾಂಗ ಇಲಾಖೆಗೆ ಅಮೆರಿಕದಿಂದ ಬೆದರಿಕೆ ಪತ್ರವೊಂದು ಬಂದಿದೆ. ಅದರಲ್ಲಿ ಇಮ್ರಾನ್‌ ಖಾನ್‌ರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಇಲ್ಲದಿದ್ದರೆ ದೇಶವು ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ, ಪಾಕಿಸ್ತಾನವನ್ನು ಕ್ಷಮಿಸಲಾಗುವುದು ಎಂದು ಪತ್ರದಲ್ಲಿದೆ’ ಎಂಬುದಾಗಿ ಇಮ್ರಾನ್‌ ತಿಳಿಸಿದ್ದಾರೆ.

‘ನಾನು ಈ ಬೆದರಿಕೆ ಪತ್ರದ ವಿರುದ್ಧ ಮಾತನಾಡುತ್ತಿದ್ದೇನೆಯೇ ಹೊರತು ಅಮೆರಿಕ ಸರ್ಕಾರದ ವಿರುದ್ಧ ಅಲ್ಲ. ಈ ಬೆದರಿಕೆಯು ನನ್ನ ಹಾಗೂ ದೇಶದ ವಿರುದ್ಧವಾಗಿದೆ’ ಎಂದು ಇಮ್ರಾನ್‌ ಹೇಳಿದ್ದಾರೆ.

ಇದೇ ವೇಳೆ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇಪಾಳದಲ್ಲಿ ಗುಟ್ಟಾಗಿ ಭೇಟಿಯಾಗುತ್ತಿದ್ದರು ಎಂಬ ಗಂಭೀರ ಆರೋಪವನ್ನೂ ಇಮ್ರಾನ್‌ ಖಾನ್‌ ಮಾಡಿದ್ದಾರೆ.

ಒಟ್ಟು 342 ಸದಸ್ಯ ಬಲದ ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಅವರು ವಿಶ್ವಾಸ ಮತ ಗೆಲ್ಲಲು 172 ಸದಸ್ಯರ ಬೆಂಬಲ ಬೇಕಿದೆ. ಆದರೆ ತಮಗೆ 175 ಸಂಸದರ ಬೆಂಬಲವಿದೆ ಎಂದು ಹೇಳುತ್ತಿರುವ ಪ್ರತಿಪಕ್ಷವು, ತಕ್ಷಣವೇ ಇಮ್ರಾನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.