ಇಸ್ಲಾಮಾಬಾದ್ : ‘ಸಿಂಧೂ ಜಲಾನಯನ ಪ್ರದೇಶದಲ್ಲಿ ಭಾರತದ ಉದ್ದೇಶಿತ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಲಾಗದು ಎಂದು ಅಂತರರಾಷ್ಟ್ರೀಯ ನ್ಯಾಯಾಲಯವೊಂದು ಆದೇಶ ನೀಡಿದೆ. ಅಲ್ಲದೇ, ಭಾರತವು ಸಿಂಧೂ ಜಲ ಒಪ್ಪಂದಕ್ಕೆ ಬದ್ಧವಾಗಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ’ ಎಂದು ಪಾಕಿಸ್ತಾನ ಮಂಗಳವಾರ ತಿಳಿಸಿದೆ.
ಪಾಕಿಸ್ತಾನದ ಅಟಾರ್ನಿ ಜನರಲ್ ಮನ್ಸೂರ್ ಉಸ್ಮಾನ್ ಈ ಬಗ್ಗೆ ಮಾಹಿತಿ ನೀಡಿದ್ದು,‘ ಸಿಂಧೂ ಜಲಾನಯನ ಪ್ರದೇಶದಲ್ಲಿ ಭಾರತವು ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ರೂಪಿಸಿದ್ದ ಉದ್ದೇಶಿತ ಯೋಜನೆಯನ್ನು ಪ್ರಶ್ನಿಸಿ 2023ರಲ್ಲಿ ನೆದರ್‌ಲೆಂಡ್ಸ್‌ನ ಹೇಗ್ ಮೂಲದ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ಇದೀಗ ನ್ಯಾಯಾಲಯವು ನದಿಗಳ ಮೇಲಿನ ಪಾಕಿಸ್ತಾನದ ಹಕ್ಕನ್ನು ಪುರಸ್ಕರಿಸುವುದರ ಜತೆಗೆ ಸಿಂಧೂ ಜಲ ಒಪ್ಪಂದಕ್ಕೆ ಬದ್ಧವಾಗಿರುವಂತೆ ಭಾರತಕ್ಕೆ ನಿರ್ದೇಶಿಸಿದೆ’ ಎಂದಿದ್ದಾರೆ.
ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.