ADVERTISEMENT

ಗೆಳೆಯನ ದೇಹದ ತುಂಡುಗಳನ್ನು ಎಸೆದ ಜಾಗದಲ್ಲಿಯೇ ಗಾಢ ನಿದ್ರೆಗೆ ಜಾರಿದ ಮಹಿಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2021, 8:43 IST
Last Updated 11 ಡಿಸೆಂಬರ್ 2021, 8:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ: ಮನುಷ್ಯ ಕ್ರೌರ್ಯದ ಅತಿರೇಕವನ್ನು ಬಿಚ್ಚಿಟ್ಟ ಘಟನೆಯೊಂದು ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ನಡೆದಿದೆ. ಸದ್ದಾರ್‌ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆದಿರುವ ಈ ಘಟನೆ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.

ಇಲ್ಲಿನ ಫ್ಲ್ಯಾಟ್‌ ಒಂದರ ಕದ ತೆರೆದಾಗ ಪೊಲೀಸರಿಗೆ ಸಿಕ್ಕಿದ್ದು, 70 ವರ್ಷದ ಪುರುಷನ ಛಿದ್ರಗೊಂಡ ದೇಹದ ಭಾಗಗಳು ಮತ್ತು ಗಾಢ ನಿದ್ದೆಯಲ್ಲಿದ್ದ 45 ವರ್ಷದ ಮಹಿಳೆ.

ಈ ಮಹಿಳೆಯನ್ನು ಕೊಲೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ಖಚಿತಪಡಿಸಿದ್ದಾರೆ.

ADVERTISEMENT

ಘಟನೆಯ ಕುರಿತು ಡಾನ್‌ ಪತ್ರಿಕೆಯೊಂದಿಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಜುಬೇರ್ ನಜೀರ್ ಶೇಖ್, ‘ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಬಳಿ ಮನುಷ್ಯನ ಕೈಯ ಭಾಗಗಳು ಬಿದ್ದಿರುವುದು ಕಂಡುಬಂದಿದೆ ಎಂದು ನಮಗೆ ಕರೆಬಂದಿತು. ನಮ್ಮ ತಂಡವು ಸ್ಥಳಕ್ಕೆ ತೆರಳಿ ಫ್ಲ್ಯಾಟ್‌ನ ಕದ ತೆರೆಯಿತು. ಅಲ್ಲಿ ಮನೆಯ ತುಂಬಾ ದೇಹವೊಂದರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಮಹಿಳೆ ಗಾಢ ನಿದ್ದೆಗೆ ಜಾರಿದ್ದಳು’ ಎಂದು ತಿಳಿಸಿದ್ದಾರೆ.

‘45 ವರ್ಷದ ಮಹಿಳೆಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದ್ದರೂ ಕೊಲೆಯ ದಿನಾಂಕ ಇನ್ನೂ ಖಚಿತವಾಗಿಲ್ಲ’ ಎಂದು ಶೇಕ್‌ ಮಾಹಿತಿ ನೀಡಿದ್ದಾರೆ.

‘ರಕ್ತ ಮೆತ್ತಿದ್ದ ಬಟ್ಟೆಗಳು ಮತ್ತು ದೇಹವನ್ನು ತುಂಡರಿಸಲು ಬಳಸಿದ ಉಪಕರಣಗಳು ಸೇರಿದಂತೆ ಸ್ಥಳದಲ್ಲಿ ಹಲವು ಪುರಾವೆಗಳು ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

‘ಮಹಿಳೆಯು ನಶೆಯಲ್ಲಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ರಗ್ಸ್‌ ಸೇವಿಸಿದ್ದಳೆಂದು ಶಂಕಿಸಲಾಗಿದೆ. ಅವರಿಬ್ಬರು ಮದುವೆ ಆಗಿಲ್ಲವೆಂದು ಆರೋಪಿ ತಿಳಿಸಿದ್ದಾಳೆ. ಅವರಿಬ್ಬರು ಲಿವ್‌–ಇನ್‌ ಸಂಬಂಧದಲ್ಲಿದ್ದರು. ದುಡ್ಡಿನ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು ಎಂಬುದಾಗಿ ನೆರೆಯವರು ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.