
ಪಾಕಿಸ್ತಾನ
ಇಸ್ಲಾಮಾಬಾದ್: ಸ್ವಯಂ ನಿರ್ಧಾರದ ಹಕ್ಕಿಗಾಗಿ ಕಾಶ್ಮೀರ ಜನರು ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನದ ಅಚಲವಾದ ಬೆಂಬಲ ಇದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ ಪುನರುಚ್ಚರಿಸಿದ್ದಾರೆ.
ಭಾರತದ ಸೇನೆಯು 1947ರಲ್ಲಿ ಕಾಶ್ಮೀರವನ್ನು ಆಕ್ರಮಣ ಮಾಡಿಕೊಂಡಿದೆ ಎಂದು ಆರೋಪಿಸಿ, ಪ್ರತಿ ವರ್ಷ ಅಕ್ಟೋಬರ್ 27ರಂದು ಪಾಕಿಸ್ತಾನ ಆಚರಿಸುತ್ತಿರುವ ‘ಕರಾಳ ದಿನ’ದ ಅಂಗವಾಗಿ ಉಭಯ ನಾಯಕರು ಸೋಮವಾರ ಸಂದೇಶ ಬಿಡುಗಡೆ ಮಾಡಿದ್ದಾರೆ.
‘ಕಾಶ್ಮೀರದ ಜನಸಂಖ್ಯಾ ಸ್ಥಿತಿಯನ್ನು ಬದಲಿಸುವ ಪ್ರಯತ್ನದ ಮೂಲಕ ಭಾರತದಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ವಿಶ್ವಸಂಸ್ಥೆಯು ಭದ್ರತಾ ಮಂಡಳಿಯ ನಿರ್ಣಯಗಳನ್ನು ಜಾರಿಗೆ ತರುವ ಭರವಸೆ ನೀಡಲಿ’ ಎಂದು ಜರ್ದಾರಿ ಸಂದೇಶದಲ್ಲಿ ಹೇಳಿದ್ದಾರೆ.
‘ಭಾರತ ಸರ್ಕಾರ ಕಾಶ್ಮೀರದ ಜನರಿಗೆ ಸ್ವಯಂ ನಿರ್ಧಾರದ ಹಕ್ಕನ್ನು ನಿರಾಕರಿಸುತ್ತಿದೆ. ಪಾಕಿಸ್ತಾನದ 24 ಕೋಟಿ ಜನರು ಕಾಶ್ಮೀರದ ಜನರ ಜೊತೆಗಿದ್ದೇವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿ ರದ್ದು ಮತ್ತು ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದ ನಂತರ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ’ ಎಂದು ಪ್ರಧಾನಿ ಶೆಹಬಾಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.