ADVERTISEMENT

ಪಾಕ್ ಸಂಸತ್ ವಿಸರ್ಜನೆ ಸಿಂಧುತ್ವ ವಿಚಾರಣೆ: ಎನ್‌ಎಸ್ಸಿ ಸಭೆ ವರದಿ ಹಾಜರಿಗೆ ಸೂಚನೆ

ಪ್ರಧಾನಿ, ಅಧ್ಯಕ್ಷರ ನಿರ್ಧಾರಗಳು ಅಂತಿಮ ಆದೇಶಕ್ಕೆ ಬದ್ಧ –ಸಿಜೆಐ

ಪಿಟಿಐ
Published 6 ಏಪ್ರಿಲ್ 2022, 19:01 IST
Last Updated 6 ಏಪ್ರಿಲ್ 2022, 19:01 IST
ಆರಿಫ್‌ ಅಲ್ವಿ
ಆರಿಫ್‌ ಅಲ್ವಿ   

ಇಸ್ಲಾಮಾಬಾದ್: ಪಾಕ್‌ ಸಂಸತ್ತಿನ ವಿಸರ್ಜನೆ ಹಾಗೂ ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಚರ್ಚೆಗೆಅವಕಾಶ ನಿರಾಕರಿಸಿದ್ದ ಡೆಪ್ಯುಟಿ ಸ್ಫೀಕರ್‌ ರೂಲಿಂಗ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು, ‘ರಾಷ್ಟ್ರೀಯ ಭದ್ರತಾ ಮಂಡಳಿ (ಎನ್ಎಸ್‌ಸಿ) ಸಭೆಯ ವರದಿ ಹಾಜರುಪಡಿಸಬೇಕು’ ಎಂದು ಸೂಚಿಸಿದೆ.

ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನದ ತೆಹ್ರೀಕ್‌–ಇ–ಇನ್ಸಾಫ್‌ ಪಕ್ಷವನ್ನು ಪ್ರತಿನಿಧಿಸಿದ್ದ ಬಾಬರ್ ಅವಾನ್‌ ಮತ್ತು ಅಧ್ಯಕ್ಷ ಆರೀಫ್‌ ಅಲ್ವಿ ಅವರನ್ನು ಪ್ರತಿನಿಧಿಸಿದ್ದ ಅಲಿ ಜಾಫರ್‌ ಅವರು ಬುಧವಾರ ತಮ್ಮ ವಾದವನ್ನು ಮಂಡಿಸಿದರು. ಬಳಿಕ ವಿಚಾರಣೆಯನ್ನು ಗುರುವಾರಕ್ಕೆ ಕೋರ್ಟ್‌ ಮುಂದೂಡಿತು.

ಡೆಪ್ಯೂಟಿ ಸ್ಪೀಕರ್ ರೂಲಿಂಗ್‌ನ ಸಿಂಧುತ್ವ, ಸಂವಿಧಾನದ 95ನೇ ವಿಧಿ ಉಲ್ಲಂಘನೆ ಆಗಿದೆಯೇ ಎಂಬ ಬಗ್ಗೆ ನ್ಯಾಯಪೀಠ ಪ್ರಶ್ನಿಸಿತು ಎಂದು ‘ಡಾನ್’ ವರದಿ ಮಾಡಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯ ವರದಿ ಮಂಡಿಸಲು ಸೂಚಿಸಿತು.

ADVERTISEMENT

ಪ್ರಧಾನಿ ಇಮ್ರಾನ್‌ ಖಾನ್ ಮತ್ತು ಅಧ್ಯಕ್ಷ ಆರಿಫ್ ಅಲ್ವಿ ಅವರ ಎಲ್ಲ ತೀರ್ಮಾನಗಳು ಸುಪ್ರೀಂ ಕೋರ್ಟ್‌ ನೀಡಲಿರುವ ಅಂತಿಮ ಆದೇಶದ ಪರಿಧಿಗೆ ಒಳಪಟ್ಟಿರುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ನಡೆಸುತ್ತಿರುವ ನ್ಯಾಯಪೀಠವು, ಈ ಪ್ರಕರಣದ ತೀರ್ಪು ಯಾವಾಗ ನೀಡಲಾ
ಗುವುದು ಎಂಬುದನ್ನು ತಿಳಿಸಿಲ್ಲ.

ಮುಖ್ಯ ನ್ಯಾಯಮೂರ್ತಿ ಉಮರ್‌ ಅಟಾ ಬಂದಿಯಾಲ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆ ನಡೆಸುತ್ತಿದೆ. ಡೆಪ್ಯೂಟಿ ಸ್ಪೀಕರ್ ಅವರು ನೀಡಿದ್ದ ರೂಲಿಂಗ್ ‘ಅಸಾಂವಿಧಾನಿಕವಾದುದು’ ಎಂದು ವಿರೋಧಪಕ್ಷಗಳು ಆರೋಪಿಸಿವೆ. ‘ಏಪ್ರಿಲ್‌ 3ರಂದು ಸಂಸತ್ತಿನಲ್ಲಿ ಆದ ಬೆಳವಣಿಗೆಗಳನ್ನು ಮೊದಲಿಗೆ ನಾವು ಪೂರ್ಣವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ’ ಎಂಬ ಮುಖ್ಯ ನ್ಯಾಯಮೂರ್ತಿಯವರ ಹೇಳಿಕೆಯನ್ನು ಉಲ್ಲೇಖಿಸಿ ‘ಜಿಯೊ ನ್ಯೂಸ್‌’ ವರದಿ ಮಾಡಿದೆ.

ಚುನಾವಣೆಗೆ ದಿನಾಂಕ ಗೊತ್ತುಪಡಿಸಿ:ಅಯೋಗಕ್ಕೆ ಪಾಕ್ ಅಧ್ಯಕ್ಷರ ಸೂಚನೆ

ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ, ‘ಪಾಕಿಸ್ತಾನದ ನೂತನ ಸರ್ಕಾರದ ಆಯ್ಕೆಗೆ ಚುನಾವಣೆಗೆ ದಿನಾಂಕ ನಿಗದಿಪಡಿಸಬೇಕು’ ಎಂದು ಅಧ್ಯಕ್ಷ ಆರಿಫ್‌ ಅಲ್ವಿ ದೇಶದ ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾರೆ.

ಚುನಾವಣೆ ಪ್ರಕ್ರಿಯೆ ನಡೆಸಲು ಮಧ್ಯಂತರ ಸರ್ಕಾರ ರಚನೆಗೆ ವಿರೋಧ ಪಕ್ಷಗಳು ಅಸಹಕಾರ ತೋರಿವೆ. ಸಂಸತ್ತಿನ ವಿಸರ್ಜನೆ ಕ್ರಮದ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿರುವಂತೆಯೇ ಅಧ್ಯಕ್ಷರಿಂದ ಈ ಸೂಚನೆ ಹೊರಬಿದ್ದಿದೆ. ‘ಸಂವಿಧಾನದ ಪ್ರಕಾರ ಚುನಾವಣೆಯನ್ನು ನಡೆಸಲು ದಿನಾಂಕವನ್ನು ಗೊತ್ತುಪಡಿಸಬೇಕು ಎಂದು ಅಧ್ಯಕ್ಷರು ಆಯೋಗಕ್ಕೆ ತಿಳಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿಯು ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.