ಇಸ್ಲಾಮಾಬಾದ್: ’ಯುದ್ಧ ಪ್ರಾರಂಭವಾದರೆ, ಅದು ನನ್ನ ಅಥವಾ ನರೇಂದ್ರ ಮೋದಿ ಅವರ ನಿಯಂತ್ರಣದಲ್ಲಿ ಇರುವುದಿಲ್ಲ. ಭಯೋತ್ಪಾದನೆ ಕುರಿತಾಗಿ ನಿಮ್ಮ ಯಾವುದೇ ಮಾತುಕತೆ ನಾವು ಸಿದ್ಧರಿದ್ದೇವೆ. ನಾವು ಕುಳಿತು ಮಾತುಕತೆ ನಡೆಸುವುದು ಅವಶ್ಯವಾಗಿದೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.
’ಯಾರೇ ಯುದ್ಧ ಪ್ರಾರಂಭಿಸಿದರೂ ಅದು ಎಲ್ಲೆ ಕೊನೆಗೊಳ್ಳುತ್ತದೆ ಎಂಬುದು ತಿಳಿದಿರುವುದಿಲ್ಲ. ಜಗತ್ತಿನ ಇತಿಹಾಸದ ಎಲ್ಲ ಯುದ್ಧಗಳು ತಪ್ಪು ಲೆಕ್ಕಾಚಾರಗಳೇ ಆಗಿವೆ, ಹಾಗಾಗಿ ನಾನು ಭಾರತಕ್ಕೆ ಕೇಳ ಬಯಸುತ್ತಿದ್ದೇನೆ; ನಿಮ್ಮಲ್ಲಿ ಹಾಗೂ ನಮ್ಮಲ್ಲಿರುವ ಶಸ್ತ್ರಾಸ್ತ್ರಗಳಿಂದ ತಪ್ಪು ಲೆಕ್ಕಾಚಾರಗಳನ್ನು ತಪ್ಪಿಸಲು ಸಾಧ್ಯವಿದೆಯೆ?’ ಎನ್ನುವ ಮೂಲಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಮಾತನಾಡಿದ್ದಾರೆ.
1971ರ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳು ಕಾರ್ಯಾಚರಣೆಗಳಲ್ಲಿ ಮುಖಾಮುಖಿಯಾಗಿರಲಿಲ್ಲ. 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಗಡಿ ನಿಯಂತ್ರಣ ರೇಖೆ ದಾಟಿ, ಜೈಷ್ ಉಗ್ರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಬುಧವಾರ ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳು ಭಾರತದ ವಾಯು ವಲಯ ದಾಟಿ ದಾಳಿ ನಡೆಸುವ ಪ್ರಯತ್ನ ನಡೆಸುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
‘ಇಂಥ ವಾತಾವರಣ ಹೀಗೆ ಮುಂದುವರಿದರೆ, ಯಾವುದೂ ನನ್ನ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ನಿಯಂತ್ರಣದಲ್ಲಿ ಇರುವುದಿಲ್ಲ. ನಾವು ಮಾತುಕತೆಗೆ ಆಹ್ವಾನಿಸುತ್ತಿದ್ದೇವೆ...’ ಎಂದು ಟಿವಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದ ಎಫ್–16 ಜೆಟ್ ಅನ್ನು ಹೊಡೆದುರುಳಿಸಲಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಬಿದ್ದಿದೆ ಎಂದು ವಾಯುಸೇನೆ ತಿಳಿಸಿದೆ.
ಪಾಕ್ ಗಡಿ ದಾಟಿದ ಭಾರತದ ಮಿಗ್ ಫೈಟರ್ ಜೆಟ್ ಅನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿ, ಪೈಲಟ್ ಅನ್ನು ವಶಕ್ಕೆ ಪಡೆದಿದ್ದೇವೆ ಎಂದು ಪಾಕಿಸ್ತಾನ ವಿಡಿಯೊ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.