ADVERTISEMENT

ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಪಾಕಿಸ್ತಾನ ಸಿದ್ಧ: ಇಮ್ರಾನ್‌ ಖಾನ್‌

ಪಿಟಿಐ
Published 27 ಫೆಬ್ರುವರಿ 2021, 11:58 IST
Last Updated 27 ಫೆಬ್ರುವರಿ 2021, 11:58 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ‘ಭಾರತದ ಜತೆಗಿನ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆ ಮತ್ತು ಇತರ ವಲಯಗಳಲ್ಲಿ ಕದನ ವಿರಾಮ ಒಪ್ಪಂದವನ್ನು ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಭಾರತ ಮತ್ತು ಪಾಕಿಸ್ತಾನ ಸೇನೆ ಗುರುವಾರ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಜಾರಿಗೊಳಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಉಭಯ ದೇಶಗಳ ನಡುವೆ ಮತ್ತಷ್ಟು ಸೌಹಾರ್ದಯುತ ಕ್ರಮಗಳನ್ನು ಕೈಗೊಳ್ಳಲು ಪೂರಕ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಂತೆ ಕಾಶ್ಮೀರ ಜನತೆಯ ಬೇಡಿಕೆಗಳು ಮತ್ತು ಹಕ್ಕುಗಳನ್ನು ಈಡೇರಿಸಲು ಭಾರತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ನಾವು ಶಾಂತಿ ಕಾಪಾಡಲು ಬದ್ಧರಾಗಿದ್ದೇವೆ. ಬಾಕಿ ಉಳಿದಿರುವ ಎಲ್ಲ ವಿವಾದಗಳನ್ನು ಸಹ ಮಾತುಕತೆ ಮೂಲಕ ಇತ್ಯರ್ಥಗೊಳಿಸಲು ಸಿದ್ಧ’ ಎಂದು ಹೇಳಿದ್ದಾರೆ.

ಭಯೋತ್ಪಾದನೆ ನಿಗ್ರಹ ಕಾರ್ಯಾಚಾರಣೆ ನಿಲ್ಲದು’
ಉಧಮಪುರ (ಜಮ್ಮು ಮತ್ತು ಕಾಶ್ಮೀರ):
‘ಗಡಿ ನಿಯಂತ್ರಣ ರೇಖೆಯಲ್ಲಿ ಘೋಷಿಸಿರುವ ಕದನ ವಿರಾಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ’ ಎಂದು ಸೇನೆಯ ನಾರ್ಥರ್ನ್‌ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ವೈ.ಕೆ. ಜೋಶಿ ಶನಿವಾರ ತಿಳಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಭದ್ರತಾ ಪಡೆಗಳು ಸದಾ ಕಟ್ಟೆಚ್ಚರವಹಿಸಿವೆ. ಗಡಿಯಲ್ಲಿ ಎದುರಾಗಿರುವ ಎಲ್ಲ ಸವಾಲುಗಳನ್ನು ಸೇನೆ ಸಮರ್ಥವಾಗಿ ಎದುರಿಸಿದೆ. ಇನ್ನು ಮುಂದೆಯೂ ನಾವು ಸದಾ ಕಟ್ಟೆಚ್ಚರವಹಿಸುತ್ತೇವೆ’ ಎಂದು ಯೋಧರಿಗೆ ಪದಕ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ನಮ್ಮ ನೆರೆಯ ದೇಶಗಳು ಗಲಭೆ ಸೃಷ್ಟಿಸುವ ಪ್ರಯತ್ನಗಳನ್ನು ತಡೆಯುವಲ್ಲಿ ನಾರ್ಥರ್ನ್‌ ಕಮಾಂಡ್‌ ಪ್ರಮುಖ ಪಾತ್ರವಹಿಸಿದೆ. ಕವಚದ ರೀತಿಯಲ್ಲಿ ಯೋಧರು ಎಲ್ಲ ಸವಾಲುಗಳನ್ನು ಎದುರಿಸಿದ್ದಾರೆ. ನಮ್ಮ ದೇಶದ ಮೇಲೆ ದುಷ್ಟ ನೋಟ ಬೀರಿದಾಗ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.