(ಚಿತ್ರ ಕೃಪೆ: X/@FaqirShiva)
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತಂದೊ ಜಾಮ್ ಪಟ್ಟಣದ ಸಮೀಪದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಶಿವ ದೇಗುಲದ ಭೂಮಿಯನ್ನು ಅತಿಕ್ರಮಿಸಲಾಗಿದೆ ಎಂದು ಹಿಂದೂ ಸಮುದಾಯದ ನಾಯಕರೊಬ್ಬರು ಆರೋಪಿಸಿದ್ದಾರೆ.
ಈ ಸಂಬಂಧ ಹಿಂದೂ ಸಂಘಟನೆಯಾದ ದರ್‌ವಾರ್ ಇತ್ತೆಹಾದ್ ಪಾಕಿಸ್ತಾನದ ಮುಖ್ಯಸ್ಥ ಶಿವ ಕಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಬಿಡುಗಡೆ ಮಾಡಿದ್ದಾರೆ.
ದೇಗುಲದ ಜಮೀನು ಅತಿಕ್ರಮಿಸಿರುವ ದುಷ್ಕರ್ಮಿಗಳು ಅದರ ಸುತ್ತಲೂ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದಾರೆ. ಈ ಅಕ್ರಮ ಒತ್ತುವರಿಯನ್ನು ತಕ್ಷಣ ನಿಲ್ಲಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ದೇಗುಲವು ಶತಮಾನದಷ್ಟು ಹಳೆಯದಾಗಿದೆ. ಆದರೆ ದುಷ್ಕರ್ಮಿಗಳು ದೇವಾಲಯದ ಭೂಮಿ ಅತಿಕ್ರಮಿಸಿ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ಶಿವ ಮಂದಿರಕ್ಕೆ ಹೋಗುವ ರಸ್ತೆ-ಪ್ರವೇಶ ದ್ವಾರಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಕರಾಚಿಯಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ತಂದೊ ಜಾಮ್ ಪಟ್ಟಣದ ಸಮೀಪದಲ್ಲಿರುವ ಮೂಸಾ ಖಟಿಯಾನ್ ಗ್ರಾಮದಲ್ಲಿರುವ ಶಿವ ಮಂದಿರದ ಸುತ್ತಲೂ ಇರುವ ನಾಲ್ಕು ಎಕರೆ ಜಾಗವನ್ನು ದೇಗುಲದ ಸಮಿತಿಯ ನಿರ್ವಹಣೆಯಲ್ಲಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಶಿವ ದೇಗುಲದ ಐಹಿಹಾಸಿಕ ಮಹತ್ವವನ್ನು ಪರಿಗಣಿಸಿ ಸಿಂಧ್ ಪರಂಪರೆ ಇಲಾಖೆಯು ಕಳೆದ ವರ್ಷ ನವೀಕರಿಸಿತ್ತು ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.