ADVERTISEMENT

ಇರಾನ್‌– ಅಮೆರಿಕ ನಡುವಣ ಸಂಘರ್ಷ ;ಪಾಕ್‌ನಿಂದ ಸಂಯಮ ಪಾಲನೆ

ಪಿಟಿಐ
Published 13 ಜನವರಿ 2020, 19:21 IST
Last Updated 13 ಜನವರಿ 2020, 19:21 IST

ಇಸ್ಲಾಮಾಬಾದ್ : ಇರಾನ್‌– ಅಮೆರಿಕ ನಡುವಣ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್‌ ಖುರೇಷಿ, ‘ನಮ್ಮ ದೇಶವು ಗರಿಷ್ಠ ಸಂಯಮ ಕಾಯ್ದುಕೊಳ್ಳಲು ಬಯಸುತ್ತದೆ’ ಎಂದು ಹೇಳಿದ್ದಾರೆ.

ಅಮೆರಿಕ– ಇರಾನ್‌ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಮಾತುಕತೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ. ಖುರೇಷಿ ಅವರು ಇರಾನ್‌ನ ಹಿರಿಯ ಮುಖಂಡರ ಜತೆ ಮಾತುಕತೆ ನಡೆಸಿರುವುದಾಗಿ ಪಾಕ್‌ನ ವಿದೇಶಾಂಗ ವ್ಯವಹಾರಗಳ ಕಚೇರಿ ಸೋಮವಾರ ತಿಳಿಸಿದೆ.

ಪ್ರಧಾನಿ ಇಮ್ರಾನ್‌ ಖಾನ್‌ ಸೂಚನೆ ಮೇರೆಗೆ ಖುರೇಷಿ ಅವರು ಇರಾನ್‌ ಮತ್ತು ಸೌದಿ ಅರೇಬಿಯಾಕ್ಕೆ ಭಾನುವಾರ ಎರಡು ದಿನಗಳ ಭೇಟಿ ನೀಡಿದ್ದರು. ಇರಾನ್‌ನ ಹಿರಿಯ ಕಮಾಂಡರ್‌ಖಾಸಿಂ ಸುಲೇಮಾನಿ ಅವರ ಹತ್ಯೆ ನಂತರಕೊಲ್ಲಿ ಪ್ರಾಂತ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ನಿಯಂತ್ರಣಕ್ಕೆ ಪಾಕಿಸ್ತಾನ ಸಹ ಪ್ರಯತ್ನಿಸುತ್ತಿದೆ.

ADVERTISEMENT

‘ಇರಾನ್‌ ಜತೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನ ಯಾವುದೇ ಪ್ರಾಂತೀಯ ಸಂಘರ್ಷದ ಭಾಗವಾಗಲು ಇಚ್ಛಿಸುವುದಿಲ್ಲ. ಅಲ್ಲದೆ ಶಾಂತಿ ಸಂಧಾನಕಾರನ ಪಾತ್ರವನ್ನೂ ನಿರ್ವಹಿಸುವುದಿಲ್ಲ’ ಎಂದು ಖುರೇಷಿ ಹೇಳಿದ್ದಾರೆ. ತಮ್ಮ ನೆಲವನ್ನು ಯಾರೊಬ್ಬರೂ ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಪಾಕಿಸ್ತಾನದ ಸೇನೆ ಈಗಾಗಲೇ ಹೇಳಿದೆ.

ಇರಾನ್ ಅಧ್ಯಕ್ಷ ಹಸನ್‌ ರೌಹಾನಿ ಹಾಗೂ ವಿದೇಶಾಂಗ ಸಚಿವ ಜಾವದ್‌ ಝಾರಿಫ್‌ ಅವರೊಂದಿಗೆ ಖುರೇಷಿ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಮಧ್ಯಪ್ರಾಚ್ಯ ಮತ್ತು ಕೊಲ್ಲಿ ಪ್ರಾಂತ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಪಾಕಿಸ್ತಾನ ಮತ್ತು ಇರಾನ್ ಸಂಬಂಧದ ಬಗ್ಗೆಯೂ ಮಾತುಕತೆ ನಡೆಯಿತು.

‘ಯುದ್ಧ ಯಾರೊಬ್ಬರಿಗೂ ಬೇಕಾಗಿಲ್ಲ. ಮಾತುಕತೆ ಮತ್ತು ರಾಯಭಾರ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ಖುರೇಷಿ ಹೇಳಿದರು.

ಉದ್ವಿಗ್ನತೆಯನ್ನು ಕಡಿಮೆ ಮಾಡಿ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲುಆದ್ಯತೆ ನೀಡುವಂತೆ ನಾಯಕರು ಒತ್ತಾಯಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.