ಇಸ್ಲಾಮಾಬಾದ್:ಪಾಕಿಸ್ತಾನದ ವಿರುದ್ಧ ಮತ್ತೆ ಸೇನಾ ಸಂಘರ್ಷಕ್ಕೆ ಭಾರತ ಮುಂದಾದರೆ ಅದಕ್ಕೆ ತಕ್ಕ ತಿರುಗೇಟು ನೀಡಲಾಗುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾನುವಾರ ಹೇಳಿದ್ದಾರೆ.
ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗಷ್ಟೇ ಮತ್ತೆ ದುಸ್ಸಾಹಸಗಳಿಗೆ ಕೈ ಹಾಕದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.
ಅಲ್ಲದೇ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎ.ಪಿ.ಸಿಂಗ್ ಅವರು ಕೂಡ ‘ಸಿಂಧೂರ’ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 11 ರಿಂದ 12 ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿತ್ತು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ರಕ್ಷಣಾ ಸಚಿವರು ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥರ ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಆಸೀಫ್ ಪತ್ರಿಕ್ರಿಯೆ ನೀಡಿದ್ದಾರೆ.
‘0–6 ಅಂಕಗಳಲ್ಲಿ ಹೀನಾಯ ಸೋಲನ್ನು ಕಂಡ ಬಳಿಕ ತಮ್ಮ ಮೇಲಿನ ವಿಶ್ವಾಸಾರ್ಹತೆಯನ್ನು ಮತ್ತೆ ಪಡೆದುಕೊಳ್ಳಲು ಭಾರತೀಯ ಸೇನಾ ನಾಯಕರು ಮತ್ತು ರಾಜಕೀಯ ನಾಯಕರು ವ್ಯರ್ಥ ಪ‍್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಇಂಥ ಹೇಳಿಕೆ ನೀಡುತ್ತಿದ್ದಾರೆ. ಮತ್ತೆ ಇಂಥ ಪ್ರಯತ್ನ ಮಾಡಿದರೆ ಅಂಕ ಈ ಹಿಂದಿಗಿಂತಲೂ ಹೆಚ್ಚಾಗುತ್ತದೆ’ ಎಂದಿದ್ದಾರೆ.
0–6 ಎಂದು ಯಾವ ಆಧಾರದಲ್ಲಿ ಉಲ್ಲೇಖಿಸಲಾಗಿದೆ? ಅದರ ಅರ್ಥವೇನು ಎಂಬುದಕ್ಕೆ ಆಸೀಫ್ ಯಾವುದೇ ಸ್ಪಷ್ಟನೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.