ಚಿತ್ರ: Saad Sami
ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಮೊಮ್ಮಗ ಜುನೈದ್ ಸಫ್ದರ್ ಅವರು ಶಂಜಯ್ ಅಲಿ ರೋಹೈಲ್ ಅವರನ್ನು ವಿವಾಹವಾಗಿದ್ದಾರೆ. ಮೆಹೆಂದಿ ಕಾರ್ಯಕ್ರಮದಲ್ಲಿ ಶಂಜಯ್ ಅಲಿ ರೋಹೈಲ್ ಧರಿಸಿದ್ದ ಲೆಹೆಂಗಾವನ್ನು ಭಾರತೀಯ ಮೂಲದವರು ತಯಾರಿಸಿದ್ದು ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಶಂಜಯ್ ಅಲಿ ರೋಹೈಲ್ ಅವರು ನವಾಜ್ ಷರೀಫ್ ಅವರ ದೀರ್ಘಕಾಲದ ರಾಜಕೀಯ ಮಿತ್ರ ರೋಹೈಲ್ ಅಸ್ಗರ್ ಅವರ ಮೊಮ್ಮಗಳಾಗಿದ್ದಾಳೆ. ಇವರು ತಮ್ಮ ಮೆಹೆಂದಿ ಕಾರ್ಯಕ್ರಮದಲ್ಲಿ ಭಾರತೀಯ ವಸ್ತ್ರ ವಿನ್ಯಾಸಕ ಸವ್ಯಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ್ದ ಪಚ್ಚೆ ಹಸಿರು ಬಣ್ಣದ ಲೆಹೆಂಗಾ ಧರಿಸಿದ್ದರು.
ಇವರು ಧರಿಸಿದ ಲೆಹೆಂಗಾವನ್ನು ಕಸೂತಿ ಕಲೆಯಿಂದ ತಯಾರಿಸಲಾಗಿದೆ. ಅಲ್ಲದೆ ಉಡುಪಿಗೆ ಹೊಂದಿಕೆಯಾಗುವ ಆಭರಣಗಳನ್ನು ತೊಟ್ಟಿದ್ದರು. ಮದುವೆಯ ದಿನವೂ ಭಾರತೀಯ ವಸ್ತ್ರ ವಿನ್ಯಾಸಕ ತರುಣ್ ತಹಿಲಿಯಾನಿ ಅವರು ವಿನ್ಯಾಸಗೊಳಿಸಿದ ಕೆಂಪು ಸೀರೆಯನ್ನು ಆಯ್ಕೆ ಮಾಡಿದ್ದರು ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಶಂಜಯ್ ಧರಿಸಿದ ಉಡುಪಿನ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಪಾಕಿಸ್ತಾನಿ ವಿವಾಹದಲ್ಲಿ ಭಾರತೀಯ ವಿನ್ಯಾಸಕರ ಉಡುಪುಗಳನ್ನು ಧರಿಸುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಇನ್ನು ‘ಕೆಲವರು ಆಕೆ ಭಾರತೀಯ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾಳೆ’ ಎಂದು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.