ADVERTISEMENT

ಪಾಕಿಸ್ತಾನ | ತೆರಿಗೆ ಪಾವತಿಸದ 5 ಲಕ್ಷಕ್ಕೂ ಹೆಚ್ಚು ಜನರ ಸಿಮ್‌ ಸ್ಥಗಿತ!

ಪಿಟಿಐ
Published 1 ಮೇ 2024, 10:55 IST
Last Updated 1 ಮೇ 2024, 10:55 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಇಸ್ಲಾಮಾಬಾದ್: ತೆರಿಗೆ ವಂಚಿಸಿದವರ ವಿರುದ್ಧ ಕ್ರಮ ಜರುಗಿಸುವ ಭಾಗವಾಗಿ ಪಾಕಿಸ್ತಾನದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿಯ ಮೊಬೈಲ್‌ ಫೋನ್ ಸಿಮ್‌ ಕಾರ್ಡ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ಪಾಕಿಸ್ತಾನದ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

2023ರಲ್ಲಿ ತೆರಿಗೆ ವಿವರ ಸಲ್ಲಿಸಲು ವಿಫಲರಾದ ಒಟ್ಟು 5.06 ಲಕ್ಷ ಮಂದಿಯ ಸಿಮ್‌ ಕಾರ್ಡ್‌ಗಳನ್ನು ಸ್ಥಗಿತ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಸಿಮ್‌ ಕಾರ್ಡ್‌ ಸ್ಥಗಿತದ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲು ದೂರಸಂಪರ್ಕ ಸೇವಾ ಕಂಪನಿಗಳಿಗೆ ಮತ್ತು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಇಲ್ಲಿ ‘ಡಾನ್ ನ್ಯೂಸ್’ ವರದಿ ಮಾಡಿದೆ.

ADVERTISEMENT

ತೆರಿಗೆ ಪಾವತಿಸಬೇಕಿದ್ದ, ಆದರೆ ತೆರಿಗೆದಾರರ ಪಟ್ಟಿಯಲ್ಲಿ ಇಲ್ಲವಾಗಿದ್ದ 24 ಲಕ್ಷ ಮಂದಿಯ ಹೆಸರನ್ನು ಗುರುತಿಸಲಾಗಿದೆ. ಇವರ ಪೈಕಿ 5 ಲಕ್ಷಕ್ಕೂ ಹೆಚ್ಚು ಮಂದಿಯ ಸಿಮ್‌ ಸ್ಥಗಿತಕ್ಕೆ ಆದೇಶಿಸಲಾಗಿದೆ ಎಂದು ಮೂಲವೊಂದು ಹೇಳಿದೆ.

ಕಳೆದ ಮೂರು ವರ್ಷಗಳ ಪೈಕಿ ಯಾವುದಾದರೂ ಒಂದು ವರ್ಷದಲ್ಲಿ ತೆರಿಗೆಗೆ ಪರಿಗಣಿಸುವ ಆದಾಯವನ್ನು ಘೋಷಿಸಬೇಕಿದ್ದ ಹಾಗೂ 2023ರ ತೆರಿಗೆ ವರ್ಷದಲ್ಲಿ ತೆರಿಗೆ ವಿವರ ಸಲ್ಲಿಸದ ವ್ಯಕ್ತಿಗಳನ್ನು ಗುರುತಿಸಿ ಅವರ ಸಿಮ್‌ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ.

ಪಾಕಿಸ್ತಾನದ ಸಕ್ರಿಯ ತೆರಿಗೆ ಪಾವತಿದಾರರ ಪಟ್ಟಿಯ ಪ್ರಕಾರ, 2024ರ ತೆರಿಗೆ ವರ್ಷದಲ್ಲಿ 42 ಲಕ್ಷ ತೆರಿಗೆ ವಿವರಗಳ ಸಲ್ಲಿಕೆಯಾಗಿದೆ. ಇದು ಹಿಂದಿನ ವರ್ಷದಲ್ಲಿ ಸಲ್ಲಿಕೆಯಾಗಿದ್ದ 38 ಲಕ್ಷ ತೆರಿಗೆ ವಿವರಗಳಿಗೆ ಹೋಲಿಸಿದರೆ ತುಸು ಹೆಚ್ಚು. ಆದರೆ 2022ರ ತೆರಿಗೆ ವರ್ಷದಲ್ಲಿ 59 ಲಕ್ಷ ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿದ್ದವು.

2023ರ ತೆರಿಗೆ ವರ್ಷದ, ತೆರಿಗೆ ವಿವರ ಸಲ್ಲಿಸುವವರ ಸಿಮ್‌ ಕಾರ್ಡ್‌ಗಳು ಪುನಃ ಸಕ್ರಿಯಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡಿಮೆ ಆದಾಯ ಇರುವ ಜನರು ತಮ್ಮ ಆದಾಯ ತೆರಿಗೆ ವಿವರ ಸಲ್ಲಿಸುವುದನ್ನು ಪ್ರೋತ್ಸಾಹಿಸಲು ಪಾಕಿಸ್ತಾನದ ಅಧಿಕಾರಿಗಳು ಸುಲಭದ ಮಾರ್ಗವಾಗಿ ಸಿಮ್‌ ಕಾರ್ಡ್‌ ಸ್ಥಗಿತದ ಮೊರೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.