ADVERTISEMENT

ಕವಯಿತ್ರಿ ಫಹ್ಮೀದಾ ರಿಯಾಜ್ ನಿಧನ

ಪಿಟಿಐ
Published 22 ನವೆಂಬರ್ 2018, 20:15 IST
Last Updated 22 ನವೆಂಬರ್ 2018, 20:15 IST
ಫಹ್ಮೀದಾ ರಿಯಾಜ್
ಫಹ್ಮೀದಾ ರಿಯಾಜ್   

ಲಾಹೋರ್: ಭಾರತದಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ನೆಲೆಸಿದ್ದ ಖ್ಯಾತ ಕವಯತ್ರಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ‌ಫಹ್ಮೀದಾ ರಿಯಾಜ್(73) ದೀರ್ಘ ಕಾಲದ ಅನಾರೋಗ್ಯದಿಂದ ಗುರುವಾರ ನಿಧನಾದರು.

ಪಾಕಿಸ್ತಾನದ ಮಿಲಿಟರಿ ಮಾಜಿ ಸರ್ವಾಧಿಕಾರಿ ಜಿಯಾ-ಉಲ್-ಹಖ್‌ ಆಳ್ವಿಕೆಯಲ್ಲಿ ದೇಶ ತೊರೆದಿದ್ದ ರಿಯಾಜ್‌, ಸ್ವಯಂ ಗಡೀಪಾರಿಗೆ ಒಳಗಾಗಿ ಏಳು ವರ್ಷ ಭಾರತದಲ್ಲಿದ್ದರು.

1945ರ ಜುಲೈನಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಸಾಹಿತ್ಯದ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿದ ರಿಯಾಜ್‌, ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಪಾಕಿಸ್ತಾನದ ಸಿಂಧ್‌ ಪ್ರಾಂತ್ಯಕ್ಕೆ ತಂದೆಯ ವರ್ಗಾವಣೆಯಾದ ಬಳಿಕ ಅಲ್ಲಿಯೇ ನೆಲೆಸಿದರು.

ADVERTISEMENT

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಪರವಾಗಿ ರಿಯಾಜ್‌ ಸದಾ ಧ್ವನಿ ಎತ್ತುತ್ತಿದ್ದರು. ರೇಡಿಯೊ ಪಾಕಿಸ್ತಾನ್ ಮತ್ತು ಬಿಬಿಸಿ ಉರ್ದು ಸರ್ವಿಸ್‌ನಲ್ಲಿ ಕೆಲಸ ಮಾಡಿದ್ದರು.

ಉರ್ದುವಿನಲ್ಲಿ ಪ್ರಕಟವಾಗುತ್ತಿದ್ದ ಅವರ ‘ಆವಾಜ್‌’ ಪತ್ರಿಕೆ ಜಿಯಾ-ಉಲ್-ಹಖ್‌ ವಿರುದ್ಧದ ರಾಜಕೀಯ ಆರೋಪಗಳನ್ನು ಪ್ರಕಟಿಸುವ ಮೂಲಕ ಗಮನ ಸೆಳೆದಿತ್ತು. ನಂತರ ರಿಯಾಜ್‌ ಮತ್ತು ಅವರ ಎರಡನೇ ಪತಿಯನ್ನು ಹಲವು ಪ್ರಕರಣಗಳಲ್ಲಿ ಆರೋಪಿಯನ್ನಾಗಿ ಮಾಡಲಾಯಿತು. ಪತ್ರಿಕೆಯೂ ಮುಚ್ಚಿತ್ತು.

ಪತಿ ಬಂಧನಕ್ಕೆ ಒಳಗಾದ ಬಳಿಕ ಅವರು ಪಾಕಿಸ್ತಾನ ತೊರೆದು ಇಬ್ಬರು ಮಕ್ಕಳು ಮತ್ತು ಸಹೋದರಿಯೊಂದಿಗೆ ಭಾರತಕ್ಕೆ ಬಂದಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಪತಿ ಕೂಡ ಭಾರತಕ್ಕೆ ಬಂದರು. ಸುಮಾರು ಏಳು ವರ್ಷ ಭಾರತದಲ್ಲೇ ಇದ್ದ ಕುಟುಂಬ ಜಿಯಾ ಮೃತಪಟ್ಟ ಬಳಿಕ ಪಾಕ್‌ಗೆ ಮರಳಿತು ಎಂದು ‘ದಿ ನ್ಯೂಸ್ ಇಂಟರ್‌ನ್ಯಾಷನಲ್‌’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.