ಲಾಹೋರ್: ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ನಿಷೇಧಿತ ಸಂಘಟನೆ ಜಮಾತ್–ಉದ್–ದಾವಾ (ಜೆಯುಡಿ) ಆಯೋಜಿಸಿದ್ದ ರ್‍ಯಾಲಿಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶಾಸನ ಸಭೆಯ ಸ್ಪೀಕರ್ ಮಲಿಕ್ ಅಹಮದ್ ಖಾನ್ ಅವರು ಪಾಲ್ಗೊಂಡಿದ್ದಾರೆ.
ಪಾಕಿಸ್ತಾನ್ ಮುಸ್ಲಿಮ್ ಲೀಗ್–ನವಾಜ್ (ಪಿಎಂಎಲ್–ಎನ್) ಪಕ್ಷದ ಮುಖಂಡರಾಗಿರುವ ಖಾನ್ ಅವರು ಮೇ 28ರಂದು ಕಸೂರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಜೆಯುಡಿ ನಾಯಕರ ಜತೆ ವೇದಿಕೆ ಹಂಚಿಕೊಂಡು ಭಾರತದ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಅವರು ಜೆಯುಡಿ ನಾಯಕ ಸೈಫುಲ್ಲಾ ಕಸೂರಿ, ಹಫೀಜ್ ಸಯೀದ್‌ನ ಪುತ್ರ ಹಫೀಜ್ ತಲ್ಹಾ ಮತ್ತು ಇತರರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ತೀವ್ರಗಾಮಿ ಇಸ್ಲಾಮಿಸ್ಟ್ ಪಾರ್ಟಿ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಕೂಡ ಉಪಸ್ಥಿತರಿದ್ದರು.
ಜೆಯುಡಿ ರ್‍ಯಾಲಿಯಲ್ಲಿ ಪಾಲ್ಗೊಂಡ ಬಗ್ಗೆ ಪತ್ರಕರ್ತರು ಸೋಮವಾರ ಖಾನ್ ಅವರನ್ನು ಕೇಳಿದಾಗ, ‘ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅವರು (ಸೈಫುಲ್ಲಾ) ಶಂಕಿತರಾಗಿರುವುದು ಹೇಗೆ?’ ಎಂದು ಮರು ಪ್ರಶ್ನೆ ಹಾಕಿದ್ದಾರೆ.
‘ಪಹಲ್ಗಾಮ್ ದಾಳಿಯಲ್ಲಿ ತನ್ನ ಕೈವಾಡದ ಬಗ್ಗೆ ಪುರಾವೆಗಳನ್ನು ನೀಡುವಂತೆ ಪಾಕಿಸ್ತಾನವು ಭಾರತವನ್ನು ಕೇಳಿದೆ. ಆದರೆ ಭಾರತ ಆ ಕೆಲಸ ಮಾಡಿಲ್ಲ. ಈ ವಿಷಯದ ಬಗ್ಗೆ ತಟಸ್ಥ ಸಂಸ್ಥೆಯಿಂದ ತನಿಖೆ ನಡೆಸುವಂತೆಯೂ ನಾವು ಕೇಳಿಕೊಂಡಿದ್ದೇವೆ. ಅದನ್ನೂ ಸಹ ಭಾರತ ತಿರಸ್ಕರಿಸಿದೆ. ಪಾಕಿಸ್ತಾನದ ಮೇಲೆ ದಾಳಿ ಮಾಡುವುದಕ್ಕೆ ಭಾರತ ಆದ್ಯತೆ ನೀಡಿದೆ. ಅವರ ದಾಳಿಗೆ ಪಾಕಿಸ್ತಾನವು ಕೆಲವೇ ಗಂಟೆಗಳಲ್ಲಿ ತಕ್ಕ ಪ್ರತ್ಯುತ್ತರ ನೀಡಿತು’ ಎಂದು ಹೇಳಿದ್ದಾರೆ.
ರ್‍ಯಾಲಿಯಲ್ಲಿ ತಮ್ಮ ಉಪಸ್ಥಿತಿಯನ್ನು ಸಮರ್ಥಿಸಿಕೊಂಡ ಸ್ಪೀಕರ್, ‘ಈ ಕಾರ್ಯಕ್ರಮ ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ನಡೆದಿದ್ದು, ಆ ವೇದಿಕೆಯಿಂದಲೇ ಶಾಂತಿಯ ಸಂದೇಶವನ್ನು ಸಾರಿದ್ದೇನೆ’ ಎಂದಿದ್ದಾರೆ.
ಜೆಯುಡಿಯ ರಾಜಕೀಯ ಘಟಕ ಪಾಕಿಸ್ತಾನ್ ಮರ್ಕಝಿ ಮುಸ್ಲಿಮ್ ಲೀಗ್ (ಪಿಎಂಎಂಎಲ್) ಆಯೋಜಿಸಿದ್ದ ರ್‍ಯಾಲಿಯಲ್ಲಿ ಪಾಲ್ಗೊಂಡಿರುವುದಕ್ಕಾಗಿ ಖಾನ್ ಅವರಿಗೆ ಕಸೂರಿ ಮಂಗಳವಾರ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.