ಲಾಹೋರ್: ‘ಅಸಭ್ಯ, ಅನೈತಿಕ ಹಾಗೂ ಅಶ್ಲೀಲತೆಯನ್ನು ಉತ್ತೇಜಿಸುವ ನಟ– ನಟಿಯರು ಮತ್ತು ಮಹಿಳಾ ನೃತ್ಯಗಾರ್ತಿಯರ ಮೇಲೆ ಪಾಕಿಸ್ತಾನದ ಪಂಜಾಬ್ ಸರ್ಕಾರವು ಜೀವಮಾನ ಪೂರ್ತಿ ನಿಷೇಧ’ ವಿಧಿಸಿದೆ.
ಅಶ್ಲೀಲತೆಯನ್ನು ಬಿತ್ತರಿಸುವ ಚಿತ್ರಮಂದಿರಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದೆ.
‘ಪಂಜಾಬ್ ಪ್ರಾಂತ್ಯದಲ್ಲಿ ನಡೆಯುವ ರಂಗಭೂಮಿ ಹಾಗೂ ಸಿನಿಮಾ ಪ್ರದರ್ಶನದಲ್ಲಿ ಅಶ್ಲೀಲ, ಅನೈತಿಕತೆಯನ್ನು ಉತ್ತೇಜಿಸುವ ನಟ–ನಟಿಯರು, ನೃತ್ಯಗಾರ್ತಿಯರ ಮೇಲೆ ನಿಷೇಧ ವಿಧಿಸಲು ನಾವು ತಾತ್ವಿಕವಾಗಿ ನಿರ್ಧರಿಸಿದ್ದೇವೆ’ ಎಂದು ಮಾಹಿತಿ ಮತ್ತು ಸಂಸ್ಕೃತಿ ಸಚಿವರಾದ ಅಜ್ಮಾ ಬೊಖಾರಿ ಸೋಮವಾರ ಘೋಷಿಸಿದರು.
‘ಇನ್ಮುಂದೆ ನಮ್ಮ ರಂಗಭೂಮಿ, ಚಿತ್ರಮಂದಿರಗಳಲ್ಲಿ ಅಶ್ಲೀಲ ಅಥವಾ ಅನೈತಿಕತೆಗೆ ಉತ್ತೇಜನ ನೀಡುವ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಲ್ಲ ಚಿತ್ರಮಂದಿರಗಳ ಮಾಲೀಕರಿಂದ ಬರೆಸಿಕೊಂಡಿದ್ದೇವೆ. ಅಸಭ್ಯ ಚಿತ್ರಗಳನ್ನು ಪ್ರದರ್ಶಿಸಿದರೆ ಪರವಾನಗಿ ರದ್ದುಗೊಳಿಸಲಾಗುವುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.