ಇಸ್ರೇಲ್ ಜೈಲಿನಲ್ಲಿ ಬಂಧಿಯಾಗಿದ್ದ ಪ್ಯಾಲೆಸ್ಟೀನ್‌ನ ಕೈದಿಗಳು ಗಾಜಾಪಟ್ಟಿಗೆ ಬಂದ ಬಳಿಕ ರೈಫಲ್ಸ್ ಹಿಡಿದು ಬೆಂಬಲಿಗರ ಜೊತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು
ವೆಸ್ಟ್ ಬ್ಯಾಂಕ್: ಗಾಜಾ ಶಾಂತಿ ಒಪ್ಪಂದದ ಅನ್ವಯ ಸುಮಾರು 2000 ಸೆರೆಯಾಳುಗಳನ್ನು ಇಸ್ರೇಲ್ ಬಿಡುಗಡೆ ಮಾಡಿದ್ದು, ಪ್ಯಾಲೆಸ್ಟೀನಿಯನ್ನರು ಸಂಭ್ರಮಾಚರಣೆ ಮಾಡಿದರು.
ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಹಾಗೂ ಗಾಜಾದ ಖಾನ್ ಯೂನಿಸ್ ಖಾನ್‌ನ ಬೆಟುನಿಯಾದಿಂದ ಬಿಡುಗಡೆಯಾದ ಕೈದಿಗಳನ್ನು ಅಸಂಖ್ಯ ಪ್ಯಾಲೆಸ್ಟೀನ್ನಿಯನ್ನರು ಸ್ವಾಗತಿಸಿದರು. ರೆಡ್‌ಕ್ರಾಸ್ ಬಸ್‌ಗಳಲ್ಲಿ ಬಂದ ಸೆರೆಯಾಳುಗಳಿಗೆ ಗೆಲುವಿನ ಚಿಹ್ನೆ ತೋರಿದರು. ಸಾಂಪ್ರದಾಯಿಕ ಶಾಲುಗಳನ್ನು ಧರಿಸಿ ಬಂದ ಒತ್ತೆಯಾಳುಗಳನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.
ವೆಸ್ಟ್ ಬ್ಯಾಂಕ್‌ನಲ್ಲಿ ಸಂಭ್ರಮಾಚರಣೆ ಮಾಡದಂತೆ ಇಸ್ರೇಲ್ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಯಾವುದನ್ನೂ ಲೆಕ್ಕಿಸದೆ ಪ್ಯಾಲೆಸ್ಟೀನಿಯನ್ನರು ಸಂಭ್ರಮದಲ್ಲಿ ತೇಲಾಡಿದರು. ಇಸ್ರೇಲ್‌ನ ಶಸ್ತ್ರಸಜ್ಜಿತ ವಾಹನಗಳು ಸಂಚರಿಸಿ, ಆಶ್ರುವಾಯು, ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದವು. ಈ ವೇಳೆ ಗುಂಪು ಸ್ವಲ್ಪ ಮಟ್ಟಿಗೆ ಚದುರಿತು. ಈ ಬೆಳವಣಿಗೆ ಕುರಿತು ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೋಮವಾರ ಇಸ್ರೇಲ್‌ನಿಂದ ಬಿಡುಗಡೆಯಾದವರ ಪೈಕಿ ಇಬ್ಬರು ಮಹಿಳೆಯರು, ಅಪ್ರಾಪ್ತ ವಯಸ್ಸಿನ ಆರು ಮಂದಿಯೂ ಸೇರಿದ್ದಾರೆ ಎಂದು ಹಮಾಸ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ತಿಳಿಸಿದೆ. ಇದಲ್ಲದೆ, ಶಿಕ್ಷೆಗೊಳಗಾದ 250 ಕೈದಿಗಳು ಬಿಡುಗಡೆಯಾಗಿದ್ದಾರೆ. ಈ ಪೈಕಿ 159 ಮಂದಿ ‘ಫತಾ’ದ ಜೊತೆ ಸಂಬಂಧ ಹೊಂದಿದ್ದು, 63 ಮಂದಿ ಹಮಾಸ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿಸಿದೆ.
ಸೋಮವಾರ ಪ್ಯಾಲೆಸ್ಟೀನ್‌ನ 1,700 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ 1,300 ಪ್ಯಾಲೆಸ್ಟೀನ್‌ನ ಕೈದಿಗಳು ಇಸ್ರೇಲ್‌ನ ವಶದಲ್ಲಿದ್ದಾರೆ ಎಂದು ಇಸ್ರೇಲ್‌ನ ಮಾನವ ಹಕ್ಕು ಸಂಘಟನೆ ‘ಹಮೊಕೆಡ್’ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.