ADVERTISEMENT

72 ಮಂದಿ ಇದ್ದ ಅಜರ್‌ಬೈಜಾನ್‌ ವಿಮಾನ ಕಜಕಿಸ್ತಾನದಲ್ಲಿ ಪತನ: 12 ಮಂದಿ ಸುರಕ್ಷಿತ

ರಾಯಿಟರ್ಸ್
Published 25 ಡಿಸೆಂಬರ್ 2024, 9:37 IST
Last Updated 25 ಡಿಸೆಂಬರ್ 2024, 9:37 IST
   

ಮಾಸ್ಕೊ: ಅಜರ್‌ಬೈಜಾನ್‌ನಿಂದ ರಷ್ಯಾಕ್ಕೆ ತೆರಳುತ್ತಿದ್ದ 67 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದ ಎಂಬ್ರೇಯರ್ ಪ್ರಯಾಣಿಕ ವಿಮಾನವು ಬುಧವಾರ ಕಜಕಿಸ್ತಾನದ ಅಕ್ಟೌ ನಗರದ ಬಳಿ ಪತನಗೊಂಡಿದ್ದು, 12 ಜನರು ಬದುಕುಳಿದಿದ್ದಾರೆ ಎಂದು ಕಜಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಅಜರ್‌ಬೈಜಾನ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ವಿಮಾನ ಇದಾಗಿದ್ದು, ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ದಟ್ಟವಾದ ಕಪ್ಪು ಹೊಗೆ ಆವರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬದುಕುಳಿದವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಧ್ಯ ಕಜಕಿಸ್ತಾನದ ತುರ್ತು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಅಜರ್‌ಬೈಜಾನ್ ಏರ್‌ಲೈನ್ಸ್‌ನ ಎಂಬ್ರೇಯರ್ 190 ವಿಮಾನವು (ವಿಮಾನ ಸಂಖ್ಯೆ J2-8243) ಅಜರ್‌ಬೈಜಾನ್‌ನ ಬಾಕುವಿನಿಂದ ರಷ್ಯಾ ಒಕ್ಕೂಟದ ಚೆಚೆನ್ಯಾದ ರಾಜಧಾನಿ ಗ್ರೋಜ್ನಿಗೆ ಹಾರುತ್ತಿತ್ತು, ಆದರೆ, ಅಕ್ಟೌ ನಗರದಿಂದ ಸರಿಸುಮಾರು 3 ಕಿಮೀ (1.8 ಮೈಲಿ) ಇರುವಾಗ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಲಾಗಿದೆ ಎಂದು ವರದಿ ತಿಳಿಸಿದೆ.

ಗ್ರೋಜ್ನಿ ನಗರವು ಮಂಜಿನಿಂದ ಆವೃತ್ತವಾಗಿದ್ದರಿಂದ ವಿಮಾನದ ಮಾರ್ಗ ಬದಲಿಸಲಾಗಿತ್ತು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.

ತಾಂತ್ರಿಕ ಸಮಸ್ಯೆ ಸೇರಿದಂತೆ ಇತರೆ ಆಯಾಮಗಳಲ್ಲಿ ಕಜಕಿಸ್ತಾನ್‌ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರಷ್ಯಾದ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.