ADVERTISEMENT

ಪೆಗಾಸಸ್‌: ಪರವಾನಗಿ ಪ್ರಕ್ರಿಯೆ ಮರುಪರಿಶೀಲನೆಗೆ ಸಮಿತಿ ರಚಿಸಿದ ಇಸ್ರೇಲ್‌

ಪಿಟಿಐ
Published 23 ಜುಲೈ 2021, 10:16 IST
Last Updated 23 ಜುಲೈ 2021, 10:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೆರುಸಲೇಮ್‌: ಎನ್‌ಎಸ್‌ಒ ಕಂಪನಿಯ ಪೆಗಾಸಸ್‌ ತಂತ್ರಾಂಶವನ್ನುದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳು ಹಾಗೂ ಈ ತಂತ್ರಾಂಶ ಬಳಕೆಗೆ ಪರವಾನಗಿ ನೀಡುವ ಪ್ರಕ್ರಿಯೆ ಕುರಿತ ಮರುಪರಿಶೀಲನೆ ನಡೆಸಲು ಮುಂದಾಗಿರುವ ಇಸ್ರೇಲ್‌, ಸಮಿತಿಯೊಂದನ್ನು ರಚಿಸಿದೆ.

‘ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಮರುಪರಿಶೀಲನಾ ಸಮಿತಿಯೊಂದನ್ನು ರಕ್ಷಣಾ ಇಲಾಖೆ ರಚಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳು ಹಾಗೂ ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಮುಖ್ಯಸ್ಥ ರಾಮ್‌ ಬೆನ್‌–ಬರಾಕ್‌ ತಿಳಿಸಿದ್ದಾರೆ.

‘ಸಮಿತಿ ವರದಿ ಸಲ್ಲಿಸಿದ ನಂತರ, ಪೆಗಾಸಸ್‌ ತಂತ್ರಾಂಶದ ಬಳಕೆ ಹಾಗೂ ಪರವಾನಗಿ ನೀಡುವುದಕ್ಕೆ ಸಂಬಂಧಿಸಿ ಬದಲಾವಣೆಗಳ ಅಗತ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಅವರು ಆರ್ಮಿ ರೇಡಿಯೊಗೆ ತಿಳಿಸಿದ್ದಾರೆ.

ADVERTISEMENT

ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಖ್ಯಸ್ಥರಾಗಿಯೂ ಬರಾಕ್‌ ಕಾರ್ಯನಿರ್ವಹಿಸಿದ್ದಾರೆ.

ಇಸ್ರೇಲ್‌ ಸರ್ಕಾರದ ಈ ನಡೆಗೆ ಪ್ರತಿಕ್ರಿಯಿಸಿರುವ ಎನ್‌ಎಸ್‌ಒ ಕಂಪನಿ ಸಿಇಒ ಶಾಲೆವ್‌ ಹುಲಿಯೊ, ‘ತನಿಖೆಗೆ ಮುಂದಾಗಿರುವುದು ಸ್ವಾಗತಾರ್ಹ. ನಾವು ಆರೋಪಗಳಿಂದ ಮುಕ್ತರಾಗಲು ಇದರಿಂದ ಸಾಧ್ಯವಾಗಲಿದೆ ಎಂದು ಖುಷಿಯಾಗುತ್ತಿದೆ ’ ಎಂದರು.

‘ಇಸ್ರೇಲ್‌ನ ಸೈಬರ್‌ ಉದ್ಯಮಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿನ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಹಾಗೂ ಇತರರ ಕುರಿತು ಬೇಹುಗಾರಿಕೆ ನಡೆಸಲು ಈ ತಂತ್ರಾಂಶವನ್ನು ಬಳಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂಬ ಕಳವಳವೂ ಎಲ್ಲೆಡೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.