
ಲಾಸ್ ಏಂಜಲೀಸ್: ರೈಕಾ ಜೆಹ್ತಾಬ್ಚಿ ನಿರ್ದೇಶನದ ‘ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರವು ಉತ್ತರ ಪ್ರದೇಶದ ಹಪೂರ್ ಜಿಲ್ಲೆಯ ಮಹಿಳೆಯರು, ಋತುಚಕ್ರಕ್ಕೆ ಅಂಟಿರುವ ಕಳಂಕದ ವಿರುದ್ಧ ನಡೆಸಿರುವ ಹೋರಾಟದ ಕಥೆಯನ್ನು ಬಿಂಬಿಸಿದೆ.
ಮುಟ್ಟಿನ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸದ ಪರಿಣಾಮ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬರುವುದು. ಈ ಕಾರಣಕ್ಕೆ ಹೆಣ್ಣು ಮಕ್ಕಳು ಶಾಲೆ ತೊರೆದಿರುವುದನ್ನೂ ಈ ಸಾಕ್ಷ್ಯಚಿತ್ರ ಅನಾವರಣಗೊಳಿಸಿದೆ.
ಗ್ರಾಮದಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರ ಆರಂಭವಾದ ಬಳಿಕ ಅಲ್ಲಿನ ಮಹಿಳೆಯರು ತಾವೇ ಇಂತಹ ಪ್ಯಾಡ್‌ಗಳನ್ನು ನಿರ್ಮಿಸಲು ಕಲಿತು ಸ್ಯಾನಿಟರಿ ಪ್ಯಾಡ್ ನಿರ್ಮಿಸುವ ‘ಫ್ಲೈ’ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿದ ಯಶೋಗಾಥೆ ಈ ಸಾಕ್ಷ್ಯಚಿತ್ರದಲ್ಲಿದೆ.
ಲಾಸ್ ಏಂಜಲೀಸ್‌ನ ಓಕ್‌ವುಡ್ ಶಾಲೆಯ ಶಿಕ್ಷಕಿ ಮೆಲಿಸ್ಸಾ ಬರ್ಟನ್ ಅವರು ವಿದ್ಯಾರ್ಥಿಗಳಿಗೆ ನೀಡಿದ ಪ್ಯಾಡ್ ಪ್ರಾಜೆಕ್ಟ್‌ನಿಂದ ಈ ಸಾಕ್ಷ್ಯಚಿತ್ರವು ರೂಪುಗೊಂಡಿದೆ.
’ಮಹಿಳೆಯರ ಸಾಮರ್ಥ್ಯದ ಕೂಗು:
‘ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರವು ಮಹಿಳೆಯರ ಸಾಮರ್ಥ್ಯದ ಕೂಗು’ ಎಂದು ನಿರ್ಮಾಪಕಿ ಗುನೀತ್ ಮೋಂಗಾ ಹೇಳಿದ್ದಾರೆ.
ಭಾರತದ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಋತುಚಕ್ರಕ್ಕೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕುವಲ್ಲಿ ಈ ಪ್ರಶಸ್ತಿಯು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
‘ಪ್ರತಿಯೊಬ್ಬ ಮಹಿಳೆಯೂ ಇನ್ನೊಬ್ಬ ಮಹಿಳೆಯ ಉನ್ನತಿಗೆ ಶ್ರಮಿಸಬೇಕು. ಇದು ನನ್ನ ಗುರಿ ಕೂಡ ಹೌದು. ನಾನು ಇತರರಿಗಾಗಿ ಕೆಲಸ ಮಾಡಲು ಬಯಸುತ್ತೇನೆ’ ಎಂದೂ ಅವರು ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.