ADVERTISEMENT

ಪೇಶಾವರ: ಭಯೋತ್ಪಾದಕರ ದಾಳಿಗೆ 4 ಪೊಲೀಸರು ಸಾವು, 9 ಮಂದಿಗೆ ಗಾಯ

ಪಿಟಿಐ
Published 14 ಆಗಸ್ಟ್ 2025, 11:31 IST
Last Updated 14 ಆಗಸ್ಟ್ 2025, 11:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಪೇಶಾವರ: ಪಾಕಿಸ್ತಾನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪೊಲೀಸ್ ಠಾಣೆಗಳು ಹಾಗೂ ಚೆಕ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ ನಾಲ್ವರು ಪೊಲೀಸ್ ಸಿಬ್ಬಂದಿ ಮೃತಪಟ್ಟು, 9 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ADVERTISEMENT

ಬುಧವಾರ ಈ ದಾಳಿಗಳು ನಡೆದಿವೆ.

ಪೇಶಾವರದ ಹಸನ್ ಖೇಲ್ ಪೊಲೀಸ್ ಠಾಣೆ ಮತ್ತು ಎರಡು ಚೆಕ್ ಪೋಸ್ಟ್‌ಗಳ ಮೇಲೆ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸುವಾಗ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ಅಪ್ಪರ್ ದಿರ್‌ನಲ್ಲಿ, ಭಯೋತ್ಪಾದಕರು ತ್ವರಿತ ಸ್ಪಂದನಾ ಕಾರ್ಯಪಡೆ ವಾಹನದ ಮೇಲೆ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಮೂವರು ಪೊಲೀಸರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭಯೋತ್ಪಾದಕ ಪತ್ತೆಗೆ ಶೋಧ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು.

ಖೈಬರ್ ಜಿಲ್ಲೆಯಲ್ಲಿ, ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಸಖಿ ಪುಲ್‌ನಲ್ಲಿರುವ ಜಂಟಿ ಫ್ರಾಂಟಿಯರ್ ಕಾರ್ಪ್ಸ್-ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಲಾಗಿದೆ.

ನಾಸಿರ್ ಬಾಗ್ ಮತ್ತು ಮಟ್ಟಾನಿ ಪ್ರದೇಶಗಳಲ್ಲಿ ಇದೇ ರೀತಿಯ ದಾಳಿಗಳನ್ನು ಪೊಲೀಸರು ಹಿಮ್ಮೆಟ್ಟಿಸಿದ್ದಾರೆ. ಅಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಬನ್ನು ಪ್ರದೇಶದಲ್ಲಿ ಹೋವಿಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಜಂಘಾ ಚೆಕ್ ಪೋಸ್ಟ್ ಅನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಚರ್ಸದ್ದಾ ಜಿಲ್ಲೆಯಲ್ಲಿ, ಗುರುವಾರ ಮುಂಜಾನೆ ನಾಸ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ತರ್ಲಾಂಡಿ ಚೆಕ್-ಪೋಸ್ಟ್ ಮೇಲೆ ಮೋಟಾರ್ ಸೈಕಲ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ. ಸುದೈವವಶಾತ್ ಯಾವುದೇ ಸಾವು–ನೋವು ಸಂಭವಿಸಿಲ್ಲ.

ಪ್ರಾಂತ್ಯದಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಯಾವುದೇ ಹೆಚ್ಚಿನ ಬೆದರಿಕೆಗಳನ್ನು ಎದುರಿಸಲು ಪಡೆಗಳನ್ನು ಹೆಚ್ಚಿನ ಸನ್ನದ್ದ ಸ್ಥಿತಿಯಲ್ಲಿ ಇರಿಸಲಾಗಿದೆ.

ಈ ಹೇಡಿತನ ದಾಳಿ ಎಂದು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಹೇಳಿದ್ದು, ಇಂತಹ ಘಟನೆಗಳು ನಮ್ಮ ಪೊಲೀಸರ ನೈತಿಕತೆಯನ್ನು ಕುಗ್ಗಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.