ADVERTISEMENT

ಫಿಲಿಪ್ಪಿನ್ಸ್‌: ‘ಆಕಸ್ಮಿಕ‘ ಗುಂಡಿನ ದಾಳಿಯಲ್ಲಿ ಮೇಯರ್‌ ಸಾವು

ಏಜೆನ್ಸೀಸ್
Published 9 ಮಾರ್ಚ್ 2021, 7:42 IST
Last Updated 9 ಮಾರ್ಚ್ 2021, 7:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮನಿಲಾ: ಫಿಲಿಪ್ಪಿನ್ಸ್‌ನಲ್ಲಿ ಸೋಮವಾರ ನಡೆದ ‘ಆಕಸ್ಮಿಕ’ ಗುಂಡಿನ ದಾಳಿಯಲ್ಲಿ ಫಿಲಿಪ್ಪಿನ್ಸ್‌ ನಗರದ ಮೇಯರ್‌, ಅವರ ಇಬ್ಬರು ಸಹಚರರು ಸೇರಿದಂತೆ ಪೊಲೀಸ್‌ ಅಧಿಕಾರಿಗಳಿಬ್ಬರು ಮೃತಪಟ್ಟಿದ್ದಾರೆ.

‘ಪ್ರಾಥಮಿಕ ವರದಿಯ ಮೇರೆಗೆ ಇದು ಕೇವಲ ತಪ್ಪಾಗಿ ನಡೆದ ಎನ್‌ಕೌಂಟರ್‌ ಎಂದು ಅಂದಾಜಿಸಲು ಮಾತ್ರ ಸಾಧ್ಯ’ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಬ್ರಿಗೇಡಿಯರ್‌‌ ಜನರಲ್‌ ರೊನಾಲ್ಡೊ ಡಿ ಜೀಸಸ್ ಅವರು ಹೇಳಿದರು.

‘ಸೋಮವಾರ ಕ್ಯಾಟ್ಬಾಲೋಗನ್ ಸಿಟಿ ಮೇಯರ್ ರೊನಾಲ್ಡೊ ಅಕ್ವಿನೊ ಅವರು ತಮ್ಮ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ಪೂರ್ವ ಸಮಾರ್‌ ಪ್ರಾಂತ್ಯಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪೊಲೀಸರು ಎಂದಿನಂತೆ ಗಸ್ತು ತಿರುಗುತ್ತಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಅಕ್ವಿನೊ ಅವರ ಭದ್ರತಾ ಸಿಬ್ಬಂದಿ, ಅವರ ವ್ಯಾನ್‌ ಹಿಂದೆಯಿದ್ದ ಪೊಲೀಸರ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪೊಲೀಸರು ಪ್ರತ್ಯುತ್ತರ ನೀಡಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಅಕ್ವಿನ್‌, ಅವರ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರಿಬ್ಬರು ಸಾವಿಗೀಡಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಅಕ್ವಿನೊ ಅವರು ತನ್ನ ಮಗುವಿನ ಹುಟ್ಟು ಹಬ್ಬದ ಆಚರಣೆಗಾಗಿ ಮನೆಗೆ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಇದೊಂದು ಪೂರ್ವಯೋಜಿತ ಹ‌ತ್ಯೆಯಾಗಿದೆ’ ಎಂದು ಅಕ್ವಿನ್‌ ಅವರ ಸ್ನೇಹಿತ ಎಡ್ಗರ್ ಸರ್ಮಿಂಟೊ ದೂರಿದ್ದಾರೆ.

ಅಕ್ರಮ ಮಾದಕಜಾಲದ ನಂಟು

ಫಿಲಿಪ್ಪಿನ್ಸ್‌ನಲ್ಲಿ ಅಕ್ರಮ ಮಾದಕ ಜಾಲ ವ್ಯಾಪಕವಾಗಿದ್ದು, ಈ ಜಾಲದೊಂದಿಗೆ ಸಂಪರ್ಕ ಹೊಂದಿರುವ ಹಲವಾರು ಮೇಯರ್‌ಗಳು ಮತ್ತು ಪ್ರಾಂತೀಯ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗುತ್ತಿದೆ. ಅಧ್ಯಕ್ಷ ರೋಡ್ರಿಗೊ ಡುಟೆರ್ಟೆ ಅವರು ಮಾದಕ ಜಾಲದ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಕ್ವಿನ್‌ ಅವರಿಗೆ ಮಾದಕ ಜಾಲದೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ ಎಂದು ಅವರ ಸ್ನೇಹಿತ ಸರ್ಮಿಂಟೊ ಹೇಳಿದ್ದಾರೆ. ಆದರೆ ಸೋಮವಾರ ಪೊಲೀಸರೇ ಈ ಗುಂಡಿನ ದಾಳಿಯಲ್ಲಿ ಶಾಮೀಲಾಗಿರುವುದರಿಂದ ಸರ್ಕಾರದ ನಡೆಯ ಬಗ್ಗೆ ಹಲವರು ಹುಬ್ಬೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.