ADVERTISEMENT

ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಸಂಭಾಷಣೆ

ಆಫ್ಘನಿಸ್ತಾನದಲ್ಲಿ ಭದ್ರತೆ, ವ್ಯಾಪಾರ ಕೊರತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 3:17 IST
Last Updated 8 ಜನವರಿ 2019, 3:17 IST
   

ವಾಷಿಂಗ್ಟನ್‌: ಭಾರತದೊಂದಿಗೆ ಅಮೆರಿಕದ ವ್ಯಾಪಾರ ಕೊರತೆ ತಗ್ಗಿಸುವುದು ಹಾಗೂ ಅಫ್ಘನಿಸ್ತಾನದಲ್ಲಿ ಸಹಕಾರ ಹೆಚ್ಚಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಅಮೆರಿಕ–ಭಾರತ ನಡುವೆ 2019ರಲ್ಲಿ ಕಾರ್ಯತಂತ್ರ ಪಾಲುದಾರಿಕೆ ಗಟ್ಟಿಗೊಳಿಸಿಕೊಳ್ಳಲು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಭಾರತದೊಂದಿಗೆ ಅಮೆರಿಕದ ವ್ಯಾಪಾರ ಕೊರತೆ, ಇಂಡೋ–ಪೆಸಿಫಿಕ್‌ ಭಾಗದಲ್ಲಿ ಭದ್ರತೆ ಹೆಚ್ಚಿಸುವುದು ಹಾಗೂ ಅಫ್ಘನಿಸ್ತಾನದಲ್ಲಿ ಸಹಕಾರ ಮತ್ತಷ್ಟು ವಿಸ್ತರಿಸುವ ಸಂಬಂಧ ಚರ್ಚೆ ನಡೆದಿರುವುದಾಗಿ ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

ವ್ಯಾಪಾರ ಕೊರತೆಯನ್ನು ಕಡಿತಗೊಳಿಸುವುದು ಹಾಗೂ ಅಮೆರಿಕದ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಿಸುವ ನಿಟ್ಟಿನಲ್ಲಿ ಟ್ರಂಪ್‌ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾರತದಿಂದ ಆಮದು ಮಾಡಿಕೊಳ್ಳುವ ಉಕ್ಕು ಮತ್ತು ಅಲ್ಯೂಮಿನಿಯಂ ಬೆಲೆ ಏರಿಕೆಯ ಬಗ್ಗೆ ಅಮೆರಿಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದಕ್ಕೆ ಭಾರತವು ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬ ಬೆದರಿಕೆ ಕೇಳಿ ಬಂದಿತ್ತಾದರೂ, ಈ ತಿಂಗಳ ಅಂತ್ಯದವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಿರಲು ನಿರ್ಧರಿಸಿದೆ.

ADVERTISEMENT

ಅಪ್ಘನಿಸ್ತಾನದಲ್ಲಿ ಬೀಡು ಬಿಟ್ಟಿರುವ ಅಮೆರಿಕದ 14,000 ಯೋಧರ ಪಡೆಯನ್ನು ಕಡಿತಗೊಳಿಸುವ ಬಗ್ಗೆಯೂ ಟ್ರಂಪ್‌ ಯೋಚಿಸುತ್ತಿರುವುದಾಗಿ ಕಳೆದ ತಿಂಗಳು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದರು. 5 ಸಾವಿರಕ್ಕೂ ಹೆಚ್ಚು ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಯೋಚನೆಯಿಂದ ಅಫ್ಘನಿಸ್ತಾನದ ಪಡೆಗಳಿಗೆ ಸಲಹೆ ಮತ್ತು ತರಬೇತಿ ನೀಡುವ ಪ್ರಕ್ರಿಯೆಗೆ ತೊಡಕಾಗಲಿದೆ. ತಾಲಿಬಾನ್‌ ಹಾಗೂ ಇತರೆ ಉಗ್ರ ಸಂಘಟನೆಗಳನ್ನು ತಳಮುಟ್ಟಿಸಲು ನಡೆಸುವ ವೈಮಾನಿಕ ಯಾನಗಳು ಸ್ಥಗಿತಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.