ADVERTISEMENT

ವಿಮಾನ ದುರಂತ: ಸಂತ್ರಸ್ತರಿಗಾಗಿ ಮಿಡಿದ ಜರ್ಮನಿ, ಚೀನಾ, ರಷ್ಯಾ, ಫ್ರಾನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2025, 12:51 IST
Last Updated 12 ಜೂನ್ 2025, 12:51 IST
   

ನವದೆಹಲಿ: ಅಹಮದಾಬಾದ್ ವಿಮಾನ ದುರಂತದ ಕುರಿತಂತೆ ಜರ್ಮನಿ, ಚೀನಾ, ರಷ್ಯಾ, ಫ್ರಾನ್ಸ್ ದೇಶಗಳು ಸಂತಾಪ ಸೂಚಿಸಿದ್ದು, ಭಾರತದ ಜೊತೆ ಒಗ್ಗಟ್ಟು ಪ್ರದರ್ಶಿಸಿವೆ.

ಮಧ್ಯಾಹ್ನ 1.39ರ ಸುಮಾರಿಗೆ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಎಐ 171 ಏರ್ ಇಂಡಿಯಾ ವಿಮಾನವು ಟೇಕಾಫ್ ಬಳಿಕ ವಿಮಾನ ನಿಲ್ದಾಣದ ಹೊರವಲಯದಲ್ಲಿ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು.

ಏರ್ ಇಂಡಿಯಾ ಪತನದ ಆಘಾತಕಾರಿ ಚಿತ್ರಗಳನ್ನು ನಾವು ಗಮನಿಸಿದ್ದೇವೆ. ಭಾರತದ ಜನರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಜೋಹನ್ ವಡೆಫುಲ್ ಹೇಳಿದ್ದಾರೆ.

ADVERTISEMENT

‘ಅಹಮದಾಬಾದ್‌ನಿಂದ ಟೇಕಾಫ್ ಆದ ನಂತರ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಆಘಾತಕಾರಿ ಚಿತ್ರಗಳನ್ನು ನಾವು ಗಮನಿಸಿದ್ದೇವೆ. ಈಗ ತಾನೇ ಘಟನೆಯ ವಿವರಗಳನ್ನು ಪಡೆಯುತ್ತಿದ್ದೇವೆ. ಭಾರತದಲ್ಲಿರುವ ನಮ್ಮ ಸ್ನೇಹಿತರು ಮತ್ತು ಪ್ರಸ್ತುತ ತಮ್ಮ ಪ್ರೀತಿಪಾತ್ರರಿಗಾಗಿ ಕಾಯುತ್ತಿರುವ ಪ್ರತಿಯೊಬ್ಬರಿಗಾಗಿ ನನ್ನ ಪ್ರಾರ್ಥನೆಗಳು’ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತಕ್ಕೆ ಜರ್ಮನ್ ರಾಯಭಾರಿ ಫಿಲಿಪ್ ಅಕೆರ್ಮನ್, ಎಕ್ಸ್‌ನಲ್ಲಿ ಜೋಹಾನ್ ವಡೆಫುಲ್ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ವಿಮಾನ ಅಪಘಾತದ ಬಗ್ಗೆ ಭಾರತಕ್ಕೆ ಚೀನಾದ ರಾಯಭಾರಿ ಷು ಫೀಹಾಂಗ್ ದುಃಖ ವ್ಯಕ್ತಪಡಿಸಿದ್ದಾರೆ. ಅದರಿಂದ ಹಾನಿಗೊಳಗಾದ ಎಲ್ಲರಿಗೂ ಸಂತಾಪ ಸೂಚಿಸಿದ್ದಾರೆ.

ಅಹಮದಾಬಾದ್‌ನ ವಿಮಾನ ದುರಂತದಿಂದ ತೀವ್ರ ದುಃಖಿತನಾಗಿದ್ದೇನೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ನಮ್ಮ ಹೃದಯಗಳು ಮಿಡಿಯುತ್ತವೆ. ಈ ಕಷ್ಟದ ಸಮಯದಲ್ಲಿ ಬಾಧಿತರಾದ ಎಲ್ಲರೊಂದಿಗೆ ನಾವು ನಿಲ್ಲುತ್ತೇವೆ ಎಂದು ಷು ಫೀಹಾಂಗ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಭಾರತಕ್ಕೆ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಲಿಪೋವ್, ಅಹಮದಾಬಾದ್‌ನಿಂದ ಹೃದಯ ವಿದ್ರಾವಕ ಸುದ್ದಿ ಬಂದಿದೆ. ಈ ದುರಂತದಲ್ಲಿ ಮೃತರ ಕುಟುಂಬಗಳು, ಎಲ್ಲಾ ಭಾರತೀಯರು ಹಾಗೂ ಭಾರತ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ವರದಿಯಿಂದ ಫ್ರಾನ್ಸ್ ತೀವ್ರ ದುಃಖಿತವಾಗಿದೆ ಎಂದು ಭಾರತಕ್ಕೆ ಫ್ರೆಂಚ್ ರಾಯಭಾರಿ ಥಿಯೆರ್ರಿ ಮ್ಯಾಥೌ ಹೇಳಿದ್ದಾರೆ. ಈ ಕಷ್ಟದ ಸಮಯದಲ್ಲಿ ಸಂಪೂರ್ಣ ಸಂತ್ರಸ್ತ ಕುಟುಂಬಗಳ ಜೊತೆ ನಾವಿದ್ದೇವೆ ಎಂದಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮ್ಯಾಥೌ, ಅಹಮದಾಬಾದ್‌ನ ವಿಮಾನ ಅಪಘಾತದ ವರದಿಯಿಂದ ಫ್ರಾನ್ಸ್ ತೀವ್ರ ದುಃಖಿತವಾಗಿದೆ. ನಮ್ಮ ಹೃದಯ ಸಂತ್ರಸ್ತರು ಮತ್ತು ಅವರ ಪ್ರೀತಿಪಾತ್ರರಿಗೆ ಮಿಡಿಯುತ್ತಿದೆ. ಈ ಕಷ್ಟದ ಸಮಯದಲ್ಲಿ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ಅವರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.