ADVERTISEMENT

ವಿಮಾನ ಪತನ | ತನಿಖೆಗೆ ಸಂಪೂರ್ಣ ಸಹಕಾರ- ನೆದರ್ಲೆಂಡ್ಸ್‌ನ ಝೂಶ್‌ ಏವಿಯೇಷನ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 14:36 IST
Last Updated 14 ಜುಲೈ 2025, 14:36 IST
   

ಲಂಡನ್‌: ಸೌತ್‌ ಎಂಡ್‌ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ತನ್ನ ‘ಸುಜಿ’ ವಿಮಾನವು ಭಾನುವಾರ ಪತನವಾಗಿದೆ ಎಂದು ನೆದರ್ಲೆಂಡ್ಸ್‌ನ ಝೂಶ್‌ ಏವಿಯೇಷನ್‌ ದೃಢಪಡಿಸಿದೆ.

ತನಿಖೆಗೆ ಸಹಕಾರ ನೀಡುವುದಾಗಿ ಹೇಳಿರುವ ಸಂಸ್ಥೆಯು, ‘ಅಪಘಾತದ ಸಂತ್ರಸ್ತರೊಂದಿಗೆ ನಾವಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

‘ಹಾರಾಟ ಆರಂಭಿಸಿದ ಮೂರ್ನಾಲ್ಕು ಕ್ಷಣಗಳಲ್ಲೇ ವಿಮಾನ ಎಡಕ್ಕೆ ವಾಲಿತು. ಒಂದರೆಕ್ಷಣದಲ್ಲಿ ತಲೆಕೆಳಗಾಗಿ ನೆಲಕ್ಕಪ್ಪಳಿಸಿತು. ಇದರ ಬೆನ್ನಿಗೆ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿತು’ ಎಂದು ತನ್ನ ಕುಟುಂಬದೊಂದಿಗೆ ವಿಮಾನ ನಿಲ್ದಾಣದಲ್ಲಿದ್ದ ಪ್ರತ್ಯಕ್ಷದರ್ಶಿ ಜಾನ್‌ ಜಾನ್ಸನ್‌ ದುರಂತವನ್ನು ವಿವರಿಸಿದ್ದಾರೆ.

ADVERTISEMENT

ಅಪಘಾತದ ಚಿತ್ರಣವನ್ನು ಬಿಂಬಿಸುವ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಲಂಡನ್‌ನಿಂದ 72 ಕಿ.ಮೀ. ದೂರದಲ್ಲಿರುವ ಸೌತ್‌ ಎಂಡ್‌ ವಿಮಾನನಿಲ್ದಾಣವನ್ನು ದುರಂತದ ಬಳಿಕ ಮುಚ್ಚಲಾಗಿದೆ. ಅವಘಡದಲ್ಲಿ ಯಾವುದೇ ಸಾವು– ನೋವಿನ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆದರ್ಲೆಂಡ್ಸ್‌ನ ಝೂಶ್‌ ಏವಿಯೇಷನ್‌ ನಿರ್ವಹಿಸುತ್ತಿದ್ದ ಈ ವಿಮಾನವು, ಸೌತ್‌ ಎಂಡ್‌ನಿಂದ ಹಾರಾಟ ಆರಂಭಿಸುವ ಮೊದಲು ಗ್ರೀಸ್‌ನ ಅಥೆನ್ಸ್‌ನಿಂದ ಕ್ರೊಯೇಷಿಯಾದ ಪುಲಾಕ್ಕೆ ಪಯಣಿಸಿತ್ತು. ಭಾನುವಾರ ಸಂಜೆ ನೆದರ್ಲೆಂಡ್ಸ್‌ನ ಲೆಲಿಸ್ಟ್ಯಾಡ್‌ಗೆ ಮರಳಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.