ನರೇಂದ್ರ ಮೋದಿ
ಕ್ಯಾಲ್ಗರಿ: ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಅಧಿಕೃತ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯಲಿರುವ 51ನೇ ‘ಜಿ7’ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸತತ 6ನೇ ಬಾರಿಗೆ ಮೋದಿ ಅವರು ಜಿ–7 ಶೃಂಗದಲ್ಲಿ ಭಾಗಿಯಾಗುತ್ತಿದ್ದಾರೆ. ಜತೆಗೆ, 10 ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಮೋದಿ ಕೆನಡಾಗೆ ಭೇಟಿ ನೀಡುತ್ತಿರುವುದು ಗಮನಾರ್ಹ.
ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಜಿ7 ರಾಷ್ಟ್ರಗಳ ನಾಯಕರು, ಇತರ ಆಹ್ವಾನಿತ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಜಾಗತಿಕ ಸವಾಲುಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸಲಿದ್ದಾರೆ. ಜತೆಗೆ ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ವಿಶೇಷವಾಗಿ ಎಐ-ಸಂಬಂಧಿತ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಜಿ7 ಒಕ್ಕೂಟದಲ್ಲಿ ಜಪಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಕೆನಡಾ, ಇಟಲಿ ಸೇರಿದಂತೆ ಐರೋಪ್ಯ ದೇಶಗಳು ಸೇರಿವೆ. ಈ ರಾಷ್ಟ್ರಗಳ ಜೊತೆಗೆ ಐಎಂಎಫ್, ವಿಶ್ವ ಬ್ಯಾಂಕ್ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿಗಳು ಸಹ ಪಾಲ್ಗೊಳ್ಳಲಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಆ ಬಳಿಕ ಮೋದಿ ಅವರ ಮೊದಲ ಕೆನಡಾ ಭೇಟಿ ಇದಾಗಿದೆ.
ಪ್ರಧಾನಿ ಮೋದಿ ಅವರು ಮೂರು ದಿನಗಳ ಕಾಲ ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ ಪ್ರವಾಸ ಕೈಗೊಂಡಿದ್ದಾರೆ.
ಸೈಪ್ರಸ್ ಪ್ರವಾಸದ ವೇಳೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷ ನಿಕೋಸ್ ಕ್ರಿಸ್ಟೊಡೌಲಿಡ್ಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೇ ವೇಳೆ ಮೋದಿ ಅವರಿಗೆ ನಿಕೋಸ್ ಕ್ರಿಸ್ಟೊಡೌಲಿಡ್ಸ್ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್ ಕ್ರಾಸ್ ಆಫ್ ದ ಆರ್ಡರ್ ಆಫ್ ಮಕರಿಯೋಸ್–3’ ನೀಡಿ ಗೌರವಿಸಿದ್ದರು.
ಇಂದು ನಡೆಯಲಿರುವ ಜಿ7 ಶೃಂಗಸಭೆಯ ಬಳಿಕ ಮೋದಿ ಅವರು ಕ್ರೊಯೇಷಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.