ADVERTISEMENT

ಕ್ಯಾಪಿಟಲ್‌ ಗಲಭೆ: ಪೊಲೀಸ್‌ ಅಧಿಕಾರಿ ಸಾವು

ಒಟ್ಟು ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಪಿಟಿಐ
Published 8 ಜನವರಿ 2021, 22:15 IST
Last Updated 8 ಜನವರಿ 2021, 22:15 IST
ಕ್ಯಾಪಿಟಲ್‌ನಲ್ಲಿ ಗಲಭೆ
ಕ್ಯಾಪಿಟಲ್‌ನಲ್ಲಿ ಗಲಭೆ   

ವಾಷಿಂಗ್ಟನ್‌: ಸಂಸತ್‌ ಭವನದಲ್ಲಿ(ಕ್ಯಾಪಿಟಲ್‌)ಬುಧವಾರ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಗಲಭೆಯಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಕ್ಯಾಪಿಟಲ್‌ ಒಳಗೆ ಪ್ರತಿಭಟನಕಾರರು ನುಗ್ಗಿದ ಸಂದರ್ಭದಲ್ಲಿ ಅವರನ್ನು ತಡೆಯಲು ಮುಂದಾಗಿದ್ದಾಗ ಸಂಸತ್‌ ಭವನದ ಪೊಲೀಸ್‌ ಅಧಿಕಾರಿ ಬ್ರಯಾನ್‌ ಡಿ.ಸಿಕ್‌ನಿಕ್‌ ಗಾಯಗೊಂಡಿದ್ದರು. ಇದಾದ ನಂತರ ವಿಭಾಗೀಯ ಕಚೇರಿಗೆ ತೆರಳಿದ್ದ ಬ್ರಯಾನ್‌ ಅಲ್ಲಿಯೇ ಕುಸಿದು ಬಿದ್ದಿದ್ದರು. ಅಧಿಕಾರಿಯ ಸಾವಿನ ಕುರಿತು ಪೊಲೀಸ್‌ ಇಲಾಖೆಯು ತನಿಖೆ ನಡೆಸಲಿದೆ ಎಂದು ಯುಎಸ್‌ ಕ್ಯಾಪಿಟಲ್‌ ಪೊಲೀಸ್‌(ಯುಎಸ್‌ಸಿಪಿ) ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಾವಿರಾರು ಬೆಂಬಲಿಗರು ಕ್ಯಾಪಿಟಲ್‌ ಹಿಲ್‌ಗೆ ನುಗ್ಗಿದ್ದ ಸಂದರ್ಭ ನಡೆದ ಘರ್ಷಣೆಯಲ್ಲಿ 50ಕ್ಕೂ ಅಧಿಕ ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 15 ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಸಂಪುಟ ಸದಸ್ಯರಿಬ್ಬರ ರಾಜೀನಾಮೆ: ಟ್ರಂಪ್‌ ಬೆಂಬಲಿಗರು ಸಂಸತ್‌ ಭವನದ ಮೇಲೆ ನಡೆಸಿದ ದಾಳಿಯಿಂದ ಬೇಸರಗೊಂಡು ಡೊನಾಲ್ಡ್‌ ಟ್ರಂಪ್‌ ಸಂಪುಟದಲ್ಲಿದ್ದ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡಿವೊಸ್ ಮತ್ತು ಸಾರಿಗೆ ಕಾರ್ಯದರ್ಶಿ ಎಲೈನ್ ಚಾವೊ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

‘ಪ್ರಭಾವಕ್ಕೊಳಗಾಗುವ ಮಕ್ಕಳು ಈ ಘಟನೆಯನ್ನು ವೀಕ್ಷಿಸುತ್ತಿದ್ದಾರೆ ಹಾಗೂ ನಮ್ಮಿಂದಲೇ ಇದನ್ನು ಕಲಿಯುತ್ತಿದ್ದಾರೆ’ ಎಂದು ಡಿವೊಸ್ ಅವರು ಟ್ರಂಪ್‌ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

‘ಇದು ಅಮೆರಿಕದ ಇತಿಹಾಸದಲ್ಲೇ ಕರಾಳ ದಿನವಾಗಿದೆ. ಈ ಘಟನೆಯೂ ಇತರರಂತೆ ನನಗೂ ಬೇಸರವನ್ನುಂಟು ಮಾಡಿದೆ’ ಎಂದು ಚಾವೊ ಹೇಳಿದ್ದಾರೆ. ಗಲಭೆ ಬೆನ್ನಲ್ಲೇ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದ ನಾಲ್ವರು ಹಿರಿಯ ಸಲಹೆಗಾರರೂ ರಾಜೀನಾಮೆ ನೀಡಿದ್ದಾರೆ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಟ್ರಂಪ್‌ ಪದಚ್ಯುತಿಗೆ ಮುಂದಾಗಿ: ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಆ ಸ್ಥಾನದಿಂದ ಪದಚ್ಯುತಿಗೊಳಿಸಲು ಸಂವಿಧಾನದ 25ನೇ ತಿದ್ದುಪಡಿ ನಿಯಮವನ್ನು ಜಾರಿಗೊಳಿಸಬೇಕು’ ಎಂದು ಡೆಮಾಕ್ರಟಿಕ್ ಪಕ್ಷದ ಹಿರಿಯ ನಾಯಕರು ಉಪಾಧ್ಯಕ್ಷ ಮೈಕ್ ಪೆನ್ಸ್‌ ಅವರಿಗೆ ಆಗ್ರಹಪಡಿಸಿದ್ದಾರೆ.

ಅಧ್ಯಕ್ಷ ಟ್ರಂಪ್‌ ಅವರ ಅಪಾಯಕಾರಿ ಮತ್ತು ದೇಶದ್ರೋಹದ ನಡೆಗಳ ಹಿನ್ನೆಲೆಯಲ್ಲಿ ಅವರನ್ನು ಆ ಸ್ಥಾನದಿಂದ ತೆಗೆಯುವುದು ಅಗತ್ಯವಾಗಿದೆ ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್‌ನಲ್ಲಿ ಡೆಮಾಕ್ರಟಿಕ್‌ ‍ಪಕ್ಷದ ನಾಯಕ ಚುಕ್ ಚುಮರ್ ಅವರು ಗುರುವಾರ ಜಂಟಿ ಹೇಳಿಕೆ ನೀಡಿದ್ದಾರೆ.

ಪೊಲೀಸ್‌ ಮುಖ್ಯಸ್ಥ ರಾಜೀನಾಮೆ: ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಇದೇ ತಿಂಗಳು ರಾಜೀನಾಮೆ ನೀಡುವುದಾಗಿ ಯುಎಸ್‌ಸಿಪಿ ಪೊಲೀಸ್‌ ಮುಖ್ಯಸ್ಥ ಸ್ಟೀವನ್‌ ಸುಂಡ್‌ ತಿಳಿಸಿದ್ದಾರೆ.

ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್‌ ಡೆಮಾಕ್ರಾಟಿಕ್ ನಾಯಕ ಸೆನೆಟರ್ ಚುಕ್‌ ಸ್ಕುಮೆರ್ ಅವರು ಗುರುವಾರ ಪೊಲೀಸ್ ವರಿಷ್ಠರ ರಾಜೀನಾಮೆಗೆ ಒತ್ತಾಯಿಸಿದ ಹಿಂದೆಯೇ, ಸ್ವೀವನ್‌ ಅವರ ಈ ತೀರ್ಮಾನ ಹೊರಬಿದ್ದಿದೆ.

ಭದ್ರತೆಯ ಮೇಲೆ ಪ್ರಶ್ನೆ: ಪ್ರತಿಭಟನಕಾರರು ದಂಗೆ ಏಳುವ ಮುನ್ಸೂಚನೆ ಇದ್ದರೂ, ಸಂಸತ್‌ ಭವನದ ಪೊಲೀಸರು ಎಫ್‌ಬಿಐ ಏಜೆಂಟ್‌ಗಳು ಹಾಗೂ ನ್ಯಾಷನಲ್‌ ಗಾರ್ಡ್‌ ಸಿಬ್ಬಂದಿಯ ನಿಯೋಜನೆಯನ್ನು ತಿರಸ್ಕರಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರ ನಿಯಂತ್ರಣ ಕೈಮೀರಿ ಸಂಸತ್‌ ಭವನದೊಳಗೆ ನಡೆದ ಗಲಭೆಯು ಸಂಸತ್‌ ಭವನದೊಳಗೆ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಭದ್ರತೆಯ ಮೇಲೆ ಪ್ರಶ್ನೆ ಹುಟ್ಟುಹಾಕಿದೆ.

ಘಟನೆ ಖಂಡಿಸಿದ ಟ್ರಂಪ್‌: ಸುಗಮವಾದ ಅಧಿಕಾರ ಹಸ್ತಾಂತರದ ಪ್ರತಿಜ್ಞೆ

ಸಂಸತ್‌ ಭವನದಲ್ಲಿ ತನ್ನ ಬೆಂಬಲಿಗರು ನಡೆಸಿದ ದಾಂದಲೆಯನ್ನು ಡೊನಾಲ್ಡ್‌ ಟ್ರಂಪ್‌ ಕೊನೆಗೂ ಖಂಡಿಸಿದ್ದು, ‘ಇಂಥವರು ಅಮೆರಿಕವನ್ನು ಪ್ರತಿನಿಧಿಸುವುದಿಲ್ಲ’ ಎಂದಿದ್ದಾರೆ. ಜೊತೆಗೆ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಸುಗಮವಾಗಿ, ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರದ ಪ್ರತಿಜ್ಞೆಯನ್ನೂ ಮಾಡಿದ್ದಾರೆ.

‘ಎಲ್ಲ ಅಮೆರಿಕದ ಪ್ರಜೆಗಳಂತೆ, ಹಿಂಸೆ, ದಂಗೆಯಿಂದ ನನಗೂ ಆಘಾತವಾಗಿದೆ. ಸಂಸತ್‌ ಭವನವನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಕ್ಷಣವೇ ನ್ಯಾಷನಲ್‌ ಗಾರ್ಡ್ಸ್‌ಗಳನ್ನು ನಾನು ನಿಯೋಜಿಸಿದ್ದೆ. ಹಿಂಸೆ ಹಾಗೂ ದುಷ್ಕೃತ್ಯದಲ್ಲಿ ತೊಡಗಿಕೊಂಡಿದ್ದವರು ನಮ್ಮ ದೇಶವನ್ನು ಪ್ರತಿನಿಧಿಸುವುದಿಲ್ಲ. ಕಾನೂನು ಮುರಿದವರು ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲಿದ್ದಾರೆ’ ಎಂದು ಶ್ವೇತಭವನವು ಬಿಡುಗಡೆ ಮಾಡಿರುವ ವಿಡಿಯೊವೊಂದರಲ್ಲಿ ಟ್ರಂಪ್‌ ಹೇಳಿದ್ದಾರೆ.

* ಇದು ಅಮೆರಿಕದ ಇತಿಹಾಸದಲ್ಲಿನ ಕರಾಳ ದಿನ. ಅವರು ಪ್ರತಿಭಟನಕಾರರೇ ಆಗಿರಲಿಲ್ಲ. ಹಾಗೆ ಕರೆಯಲೂ ಬೇಡಿ. ಹಿಂಸೆಗೆ ಮುಂದಾಗಿದ್ದ ಸಮೂಹ ಅದು. ಅವರು ದೇಶೀಯ ಭಯೋತ್ಪಾದಕರು

–ಜೋ ಬೈಡನ್‌, ಅಮೆರಿಕದ ನಿಯೋಜಿತ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.