ಸಿಸ್ಟೀನ್ ಚಾಪೆಲ್ ಮೇಲಿನ ಚಿಮಣಿಯಿಂದ ಕಪ್ಪುಹೊಗೆ
ವ್ಯಾಟಿಕನ್ ಸಿಟಿ: ಸಿಸ್ಟಿನ್ ಚಾಪೆಲ್ (ಪೋಪ್ ಅವರ ಅಧಿಕೃತ ನಿವಾಸದ) ಮೇಲಿನ ಚಿಮಣಿಯಿಂದ ಬುಧವಾರ ಕಪ್ಪುಹೊಗೆ ಹೊರಹೊಮ್ಮಿದೆ. ಇದರೊಂದಿಗೆ, ಕಾರ್ಡಿನಲ್‌ಗಳ ಮೊದಲ ರಹಸ್ಯ ಸಭೆಯಲ್ಲಿ ಹೊಸ ಪೋಪ್ ಆಯ್ಕೆಯಾಗಿಲ್ಲ ಎಂಬ ಸಂದೇಶ ರವಾನೆಯಾಗಿದೆ.
ರೋಮನ್ ಕ್ಯಾಥೊಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾದರು.
ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆ ಮಾಡುವ ಸಂಬಂಧ ಚರ್ಚಿಸಲು ವಿಶ್ವದಾದ್ಯಂತ ಇರುವ ಕಾರ್ಡಿನಲ್‌ಗಳು ವ್ಯಾಟಿಕನ್ ಸಿಟಿಯಲ್ಲಿರುವ 'ಸಿಸ್ಟಿನ್ ಚಾಪೆಲ್'ನಲ್ಲಿ ಮೇ 7ರಂದು (ಬುಧವಾರ) ರಹಸ್ಯ ಸಭೆ ಸೇರಿದ್ದರು.
ಒಟ್ಟು 252 ಕಾರ್ಡಿನಲ್‌ಗಳಿದ್ದಾರೆ. ಇದರಲ್ಲಿ, 80 ವರ್ಷದ ಒಳಗಿನವರು ಮಾತ್ರವೇ ಪೋಪ್ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. ಉಳಿದವರು, ಚರ್ಚೆಯಲ್ಲಷ್ಟೇ ಭಾಗವಹಿಸಲಿದ್ದಾರೆ. ಮೂರನೇ ಎರಡರಷ್ಟು ಮತ ಪಡೆಯುವವರು ಮುಂದಿನ ಪೋಪ್ ಆಗಲಿದ್ದಾರೆ.
ಮತದಾನಕ್ಕೆ ಅರ್ಹತೆಯುಳ್ಳ ಒಟ್ಟು 135 ಕಾರ್ಡಿನಲ್‌ಗಳ ಪೈಕಿ ಇಬ್ಬರು ಆರೋಗ್ಯದ ಕಾರಣದಿಂದಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ವ್ಯಾಟಿಕನ್ ಸಿಟಿಯ ಕ್ಯಾಥೊಲಿಕ್ ಚರ್ಚ್‌ಗೆ ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.