ADVERTISEMENT

Pope Francis: ಶನಿವಾರ ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ

ರಾಯಿಟರ್ಸ್
Published 22 ಏಪ್ರಿಲ್ 2025, 11:07 IST
Last Updated 22 ಏಪ್ರಿಲ್ 2025, 11:07 IST
   

ವ್ಯಾಟಿಕನ್ ಸಿಟಿ(ರೋಮ್‌): ಪೋಪ್‌ ಫ್ರಾನ್ಸಿಸ್‌ ಅವರ ಅಂತಿಮ ಸಂಸ್ಕಾರವನ್ನು ಶನಿವಾರ ಬೆಳಿಗ್ಗೆ 10 ಗಂಟೆಗೆ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ನೆರವೇರಿಸಲು ಕಾರ್ಡಿನಲ್‌ಗಳು ನಿರ್ಧರಿಸಿದ್ದಾರೆ. ಪೋಪ್‌ ಅವರ ಮೃತದೇಹವನ್ನು ಸೇಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ಇರಿಸಿ, ಬುಧವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಪೋಪ್‌ ನಿಧನದ ನಂತರ ನಿರ್ವಹಿಸುವ ಕಾರ್ಯಗಳ ಸಿದ್ಧತೆಗಾಗಿ ಕಾರ್ಡಿನಲ್‌ಗಳು ಮಂಗಳವಾರ ಸಭೆ ಸೇರಿದ್ದರು. ಪೋಪ್‌ ಫ್ರಾನ್ಸಿನ್‌ ಅವರು ಜೀವಿಸಿದ್ದ ಸಂತಾ ಮಾರ್ತಾ ಹೋಟೆಲ್‌ನಲ್ಲಿ, ಪೋಪ್‌ ಅವರ ಮೃತದೇಹವನ್ನು ಇರಿಸಲಾಗಿದೆ. ಮೃತದೇಹದ ಫೋಟೊಗಳನ್ನು ವ್ಯಾಟಿಕನ್‌ ಸಿಟಿಯ ಅಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಕಮಲೆಂಗೊ ಅಧಿಕಾರ:

ADVERTISEMENT

ಕಾರ್ಡಿನಲ್‌ಗಳ ಸಮಿತಿಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವವರನ್ನು ‘ಕಮಲೆಂಗೊ’ ಎನ್ನಲಾಗುತ್ತದೆ. ಐರ್ಲೆಂಡ್‌ನ ಪೋಪ್‌ ಫ್ರಾನ್ಸಿಸ್‌ ಅವರು ಕಾರ್ಡಿನಲ್ ಕೆವಿನ್‌ ಜೋಸಿಫ್‌ ಫ್ಯಾರೆಲ್‌ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಿದ್ದರು. ಸಂಪ್ರದಾಯದಂತೆ ಪೋಪ್‌ ಮೃತಪಟ್ಟಾಗ ವ್ಯಾಟಿಕನ್‌ ಸಿಟಿಯ ನಿರ್ವಹಣೆಯನ್ನು ಕಮಲೆಂಗೊ ನಿರ್ವಹಿಸುತ್ತಾರೆ.

ಮೃತ ಪೋಪ್‌ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳ ಮೇಲ್ವಿಚಾರಣೆಯಿಂದ ಹಿಡಿದು ನೂತನ ಪೋಪ್‌ ಆಯ್ಕೆ ಪ್ರಕ್ರಿಯೆವರೆಗೆ ಎಲ್ಲವನ್ನೂ ಕಮಲೆಂಗೊ ಅವರೇ ನಿರ್ವಹಿಸುತ್ತಾರೆ. ‌2019ರಲ್ಲಿಯೇ ಪೋಪ್‌ ಫ್ರಾನ್ಸಿಸ್‌ ಅವರು ಕಾರ್ಡಿನಲ್‌ ಕೆವಿನ್‌ ಫ್ಯಾರೆಲ್‌ ಅವರಿಗೆ ಕಮಲೆಂಗೊ ಜವಾಬ್ದಾರಿಯನ್ನು ನೀಡಿದ್ದರು.

ನಾಯಕರ ಆಗಮನ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಂಪತಿ, ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೆ, ಬ್ರೆಜಿಲ್‌ ಅಧ್ಯಕ್ಷ ಲೂಯಿಜ್‌ ಇನ್ಯಾಸಿಯೊ ಲುನಾ ದ ಸಿಲ್ವಾ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಐರೋಪ್ಯ ಒಕ್ಕೂಟದ ಹಲವು ದೇಶಗಳ ಪ್ರಮುಖರು ಪೋಪ್‌ ಫ್ರಾನ್ಸಿಸ್‌ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಅಂತ್ಯಕ್ರಿಯೆ ವಿಧಾನಗಳನ್ನು ಸರಳಗೊಳಿಸಿದ್ದ ಪೋಪ್‌

ಪೋಪ್‌ ಆಗಿ ಆಯ್ಕೆಯಾದಾಗಿನಿಂದಲೂ ಫ್ರಾನ್ಸಿಸ್‌ ಅವರು ಸರಳ ಜೀವನ ನಡೆಸಿದ್ದರು. ತಮ್ಮ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಸರಳವಾಗಬೇಕು ಎಂದು ಅವರು ಬಯಸಿದ್ದರು. ಇದಕ್ಕಾಗಿ 2024ರ ಏಪ್ರಿಲ್‌ನಲ್ಲಿ ಹೊಸ ನಿಯಮಗಳನ್ನು ರೂಪಿಸಿದ್ದ ಅವರು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಅಂತ್ಯಗೊಳಿಸಿದ್ದರು.

  • ಸಂಪ್ರದಾಯದಂತೆ ಸೇಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ನನ್ನನ್ನು ಹೂಳಬಾರದು. ವ್ಯಾಟಿಕನ್‌ ಸಿಟಿಯಿಂದ ದೂರ ರೋಮ್‌ನಲ್ಲಿರುವ ಸಂತಾ ಮರಿಯಾ ಮ್ಯಾಜಿಯೊರೆ ಚರ್ಚ್‌ನಲ್ಲಿ ಹೂಳಬೇಕು

  • ಸಾರ್ವಜನಿಕರ ದರ್ಶನಕ್ಕಾಗಿ ಎತ್ತರದ ವೇದಿಕೆ ಸಿದ್ಧಪಡಿಸಿ ನನ್ನ ಮೃತದೇಹವನ್ನು ಅಲ್ಲಿ ಇರಿಸಬಾರದು. ಶವಪೆಟ್ಟಿಗೆಯಲ್ಲಿಯೇ ಮೃತದೇಹವನ್ನು ಇಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು

  • ಒಂದರ ಒಳಗೊಂದರಂತೆ ಮೂರು ಶವಪೆಟ್ಟಿಗೆಯಲ್ಲಿ ಮೃತ ಪೋಪ್‌ ಅವರ ಶವವಿಡುವ ಸಂಪ್ರದಾಯವಿದೆ. ಆದರೆ ನನ್ನ ಮೃತದೇಹವನ್ನು ಕಟ್ಟಿಗೆಯಿಂದ ಮಾಡಿದ ಒಂದು ಪೆಟ್ಟಿಗೆಯಲ್ಲಿ ಇರಿಸಿದರೆ ಸಾಕು.

ವಲಸಿಗರನ್ನು ಸ್ವಾಗತಿಸಿ ನ್ಯಾಯಯುತವಾಗಿ ನಡೆದುಕೊಳ್ಳಿ ಎಂದು ಜಗತ್ತಿನ ಶಕ್ತಿಕೇಂದ್ರದಂತಿರುವ ದೇಶಗಳಿಗೆ ಹೇಳಿದ್ದ ಪೋಪ್‌ ಫ್ರಾನ್ಸಿಸ್‌ ಅವರು ಈ ಭೂಮಿಯೇ ನಮ್ಮೆಲ್ಲರ ಮನೆ ಎಂದು ನೆನಪಿಸಿದ್ದರು.
ಬೊಲಾ ಟಿನುಬು, ನೈಜಿರಿಯಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.