ADVERTISEMENT

ಕೊರೊನಾ ವೈರಸ್‌ನ ಹೊಸ ತಳಿ ಸಾಧ್ಯತೆ ಹೆಚ್ಚು: ಡಬ್ಲ್ಯೂಎಚ್‌ಒ

ಬಿಎ.2 ತಳಿಯ ಸೋಂಕು ವೇಗವಾಗಿ ಪ್ರಸರಣವಾಗುತ್ತಿದೆ: ಎಚ್ಚರಿಕೆ

ಪಿಟಿಐ
Published 9 ಫೆಬ್ರುವರಿ 2022, 16:29 IST
Last Updated 9 ಫೆಬ್ರುವರಿ 2022, 16:29 IST
ಮಾರಿಯಾ ವ್ಯಾನ್‌ ಕರ್ಖೋವ್
ಮಾರಿಯಾ ವ್ಯಾನ್‌ ಕರ್ಖೋವ್   

ಜಿನಿವಾ: ಕೊರೊನಾ ವೈರಸ್‌ ರೂಪಾಂತರಗೊಂಡು ಹೊಸ ತಳಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಎಚ್ಚರಿಸಿದೆ.

‘ವೈರಸ್‌ನ ಓಮೈಕ್ರಾನ್‌ ತಳಿಯೇ ಕೊನೆಯ ರೂಪಾಂತರವಲ್ಲ. ಓಮೈಕ್ರಾನ್‌ನ ನಾಲ್ಕು ಬೇರೆ ತಳಿಗಳನ್ನು ಪತ್ತೆ ಹಚ್ಚು ಕಾರ್ಯವನ್ನು ಸಂಸ್ಥೆ ಈಗಾಗಲೇ ಆರಂಭಿಸಿದೆ’ ಎಂದು ಕೋವಿಡ್‌–19ಗೆ ಸಂಬಂಧಿಸಿ ಡಬ್ಲ್ಯೂಎಚ್‌ಒದ ತಾಂತ್ರಿಕ ತಂಡದ ಮುಖ್ಯಸ್ಥೆ ಮಾರಿಯಾ ವ್ಯಾನ್‌ ಕರ್ಖೋವ್ ಹೇಳಿದ್ದಾರೆ.

ಡಬ್ಲ್ಯೂಎಚ್‌ಒದ ಸಾಮಾಜಿಕ ಜಾಲತಾಣಗಳ ಮೂಲಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು.

ADVERTISEMENT

‘ಕೊರೊನಾ ವೈರಸ್‌ ಬಗ್ಗೆ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಆದರೆ, ಸಮಗ್ರವಾದ ಮಾಹಿತಿ ಇಲ್ಲ. ಎಷ್ಟು ಬಾರಿ ಬೇಕಾದರೂ ರೂಪಾಂತರಗೊಳ್ಳುವ ಸಾಮರ್ಥ್ಯ–ಗುಣಲಕ್ಷಣವನ್ನು ವೈರಸ್‌ ಹೊಂದಿರುವ ಕಾರಣ, ಅದರ ರೂಪಾಂತರ ಪ್ರಕ್ರಿಯೆಯ ಕುರಿತು ಅಧ್ಯಯನ ಮಾಡುತ್ತಿದ್ದೇನೆ’ ಎಂದೂ ಅವರು ವಿವರಿಸಿದರು.

‘ಓಮೈಕ್ರಾನ್ ನಂತರ ರೂಪಾಂತರಗೊಂಡು ಹೊಸ ತಳಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೇಗೆ ಹೆಚ್ಚಾಗಿವೆಯೋ, ಅವುಗಳ ಸೋಂಕು ಪ್ರಸರಣವಾಗುವ ವೇಗವೂ ಹೆಚ್ಚಾಗಿಯೇ ಇರಲಿದೆ’ ಎಂದು ಅವರು ಹೇಳಿದರು.

‘ಸಂಭಾವ್ಯ ತಳಿಗಳ ವಿರುದ್ಧವೂ ನಾವು ರಕ್ಷಣೆ ಪಡೆಯಬೇಕು. ಇದಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ. ಅದೇ ರೀತಿ ಸೋಂಕು ಪ್ರಸರಣ ತಡೆಗಾಗಿ ಜಾರಿಗೊಳಿಸುವ ನಿರ್ಬಂಧಗಳನ್ನು ಸಹ ಪಾಲಿಸುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

‘ಓಮೈಕ್ರಾನ್‌ನ ಬಿಎ.1 ತಳಿಗಿಂತಲೂ ಬಿಎ.2 ತಳಿಯ ಸೋಂಕು ಹೆಚ್ಚು ವೇಗವಾಗಿ ಪ್ರಸರಣ ಸಾಮರ್ಥ್ಯ ಹೊಂದಿದೆ. ಹೀಗಾಗಿ ಜಾಗತಿಕವಾಗಿ ಈಗ ಬಿಎ.2 ತಳಿಯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ವ್ಯಾನ್‌ ಕರ್ಖೋವ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.