ADVERTISEMENT

ಅಮೆರಿಕ ಒಗ್ಗೂಡಿಸಲು ಜೋ ಬೈಡನ್‌ ಪಣ

ಪಿಟಿಐ
Published 8 ನವೆಂಬರ್ 2020, 6:52 IST
Last Updated 8 ನವೆಂಬರ್ 2020, 6:52 IST
ಜೊ ಬೈಡನ್‌ ಮತ್ತು ಅವರ ಪತ್ನಿ ಜಿಲ್‌ ಬೈಡನ್‌ ಬೆಂಬಲಿಗರೊಂದಿಗೆ ಸಂತೋಷ ಹಂಚಿಕೊಳ್ಳುತ್ತಿರಯವುದು ಎಪಿ/ಪಿಟಿಐ ಚಿತ್ರ
ಜೊ ಬೈಡನ್‌ ಮತ್ತು ಅವರ ಪತ್ನಿ ಜಿಲ್‌ ಬೈಡನ್‌ ಬೆಂಬಲಿಗರೊಂದಿಗೆ ಸಂತೋಷ ಹಂಚಿಕೊಳ್ಳುತ್ತಿರಯವುದು ಎಪಿ/ಪಿಟಿಐ ಚಿತ್ರ   

ವಾಷಿಂಗ್ಟನ್‌: ‘ಅಮೆರಿಕವನ್ನು ಸುಧಾರಿಸುವ ಸಮಯ ಬಂದಿದೆ. ಅಮೆರಿಕವನ್ನು ನಾನು ಒಗ್ಗೂಡಿಸುತ್ತೇನೆ’ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ ಅವರು ಹೇಳಿದ್ದಾರೆ.

2020ನೇ ಅಧ್ಯಕ್ಷೀಯ ಚುನಾವಣೆ ಗೆಲುವಿನ ಬಳಿಕ ವಿಲ್ಮಿಂಗ್ಟನ್, ಡೆಲವೇರ್‌ನಲ್ಲಿ ಶನಿವಾರ ರಾತ್ರಿ ಜನರನ್ನುದ್ದೇಶಿಸಿ ಮಾತನಾಡಿದ ಬೈಡನ್‌,‘ ನಾನು ಜನರನ್ನು ವಿಭಜಿಸದೆ, ಅವರನ್ನು ಒಗ್ಗೂಡಿಸುವ ಅಧ್ಯಕ್ಷನಾಗುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ. ನಾನು ನೀಲಿ ರಾಜ್ಯಗಳು, ಕೆಂಪು ರಾಜ್ಯಗಳು ಎಂದು ವಿಭಜಿಸದೆ, ಸಂಪೂರ್ಣ ಅಮೆರಿಕವನ್ನು ಒಂದಾಗಿ ನೋಡುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ’ ಎಂದು ಬೈಡನ್‌ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.

ADVERTISEMENT

ಕೋವಿಡ್‌ ನಿಯಂತ್ರಣದ ಭರವಸೆ:

ನಿರ್ದಿಷ್ಟ ಯೋಜನೆಯೊಂದಿಗೆ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರುವುದೇ ನನ್ನ ಮೊದಲ ಕೆಲಸ ಎಂದು ಬೈಡನ್‌ ಅವರು ಭರವಸೆ ನೀಡಿದ್ದಾರೆ.

ಯೋಜನೆಗಾಗಿ ವಿಜ್ಞಾನಿಗಳು ಮತ್ತು ತಜ್ಞರ ತಂಡವೊಂದನ್ನು ಸೋಮವಾರ ರೂ‍ಪಿಸಲಾಗುವುದು. ಈ ತಂಡವು ನೀಲಿ ನಕ್ಷೆ ರೂಪಿಸಲು ಸಹಾಯ ಮಾಡುತ್ತದೆ ಎಂದು ಬೈಡನ್‌ ತಿಳಿಸಿದರು.

ಕೊರೊನಾ ಪಿಡುಗಿನ ನಡುವೆಯೂ ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಡೊನಾಲ್ಡ್‌ ಟ್ರಂಪ್‌ ವಾದಿಸಿದ್ದು, ಚುನಾವಣಾ ಫಲಿತಾಂಶದ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.

ಎಚ್‌1ಬಿ ವೀಸಾ ಮಿತಿ ಹೆಚ್ಚಳ ಚಿಂತನೆ: ಎಚ್‌–1ಬಿ ವೀಸಾ ಸೇರಿದಂತೆ ಉನ್ನತ ಕೌಶಲ ಆಧಾರಿತ ವೀಸಾಗಳ ಮೇಲಿನ ಮಿತಿಯನ್ನು ಹೆಚ್ಚಿಸಲು ಮತ್ತು ಉದ್ಯೋಗ ಆಧಾರಿತ ವೀಸಾ ಮೇಲಿನ ಮಿತಿಯನ್ನು ತೆಗೆಯಲು ಜೋ ಬೈಡನ್‌ ಚಿಂತನೆ ನಡೆಸಿದ್ದಾರೆ.

ಈ ಎರಡು ಮಹತ್ತರ ನಿರ್ಧಾರಗಳು ಭಾರತೀಯ ವೃತ್ತಿಪರರಿಗೆ ಪ್ರಯೋಜನಕಾರಿಯಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.