ADVERTISEMENT

ಅರ್ಜೆಂಟೀನಾ ಮರುನಿರ್ಮಾಣ ಆರಂಭ: ಚುನಾಯಿತ ಅಧ್ಯಕ್ಷ ಜೇವಿಯರ್ ಮಿಲಿ ಶಪಥ

ಚುನಾಯಿತ ಅಧ್ಯಕ್ಷ ಜೇವಿಯರ್ ಮಿಲಿ ಶಪಥ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 16:25 IST
Last Updated 20 ನವೆಂಬರ್ 2023, 16:25 IST
ಜೇವಿಯರ್ ಮಿಲಿ 
ಜೇವಿಯರ್ ಮಿಲಿ    

ಬ್ಯೂನಸ್ ಐರಿಸ್‌ (ಅರ್ಜೆಂಟೀನಾ): ‘ಕಳೆದ ಕೆಲ ದಶಕಗಳಿಂದ ದೇಶದ ಆರ್ಥಿಕ ಸ್ಥಿತಿ ಇಳಿಮುಖವಾಗುತ್ತಲೇ ಇತ್ತು. ಹಣದುಬ್ಬರ ಪ್ರಮಾಣ ಮೂರಂಕಿ ಗಡಿ ದಾಟಿತ್ತು. ಇನ್ನು ಮುಂದೆ, ದೇಶ ಆರ್ಥಿಕವಾಗಿ ಕುಸಿಯುವುದಕ್ಕೆ ಅಂತ್ಯ ಹಾಡುವುದಾಗಿ ಅರ್ಜೆಂಟೀನಾದ ನೂತನ ಚುನಾಯಿತ ಅಧ್ಯಕ್ಷ ಜೇವಿಯರ್ ಮಿಲಿ ಶಪಥ ಮಾಡಿದ್ದಾರೆ.

ಈಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಮರುನಿರ್ಮಾಣ ಆರಂಭವಾಗಲಿದೆ ಎಂದರು.

ಶೇ 55.7 ರಷ್ಟು ಮತ ಗಳಿಸುವ ಮೂಲಕ ಅರ್ಜೆಂಟೀನಾ ರಾಜಕಾರಣದಲ್ಲಿ ದೀರ್ಘಕಾಲದಿಂದಲೂ ಪ್ರಾಬಲ್ಯ ಹೊಂದಿದ್ದ ಎಡಪಕ್ಷಗಳ ಮೈತ್ರಿಕೂಟವನ್ನು ಜೇವಿಯರ್ ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ, ಹಣಕಾಸು ಸಚಿವರಾಗಿದ್ದ ಸರ್ಗಿಯೊ ಮಸ್ಸಾ ಶೇ 44 ರಷ್ಟು ಮತ ಪಡೆದು, ಸೋಲನುಭವಿಸಿದ್ದಾರೆ.

ADVERTISEMENT

‘ಈ ದಿನ ಅರ್ಜೆಂಟೀನಾದ ಮರುನಿರ್ಮಾಣ ಆರಂಭವಾಗಲಿದೆ. ದೇಶ ಆರ್ಥಿಕವಾಗಿ ಕುಸಿಯುವುದರ ಅಂತ್ಯವೂ ಆರಂಭವಾಗಲಿದೆ. ದೇಶವನ್ನು ಅಧೋಗತಿಗೆ ತಳ್ಳುವ ಮಾದರಿ ಅಂತ್ಯಗೊಂಡಿದ್ದು, ಈಗ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಲ್ಯಾಟಿನ್‌ ಅಮೆರಿಕದ ಮೂರನೇ ದೊಡ್ಡ ಆರ್ಥಿಕತೆಯಾಗಿರುವ ಅರ್ಜೆಂಟೀನಾದ ಆರ್ಥಿಕತೆ ಇತ್ತೀಚಿನ ಕೆಲ ದಶಕಗಳಲ್ಲಿ ಕುಸಿಯುತ್ತಾ ಬಂದಿದೆ. ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಬೇರೆ ದೇಶಗಳ ಹಸ್ತಕ್ಷೇಪ, ವೆಚ್ಚಗಳಿಗಾಗಿ ಅಧಿಕ ಪ್ರಮಾಣದಲ್ಲಿ ನೋಟುಗಳ ಮುದ್ರಣ, ಹಣದುಬ್ಬರ ಹಾಗೂ ಮರುಪಾವತಿ ಸಾಧ್ಯವಾಗದ ಕಾರಣ ಹೆಚ್ಚುತ್ತಲೇ ಹೋದ ಸಾಲದ ಹೊರೆಯಿಂದಾಗಿ ದೇಶವು ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.