ADVERTISEMENT

Presidential Election: ಸೌತ್‌ ಕರೊಲಿನಾ: ಬೈಡನ್‌ಗೆ ಗೆಲುವು

ಪಿಟಿಐ
Published 4 ಫೆಬ್ರುವರಿ 2024, 6:04 IST
Last Updated 4 ಫೆಬ್ರುವರಿ 2024, 6:04 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಸೌತ್‌ ಕರೊಲಿನಾದಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಗೆಲುವು ಪಡೆದಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಮುಂದಿಟ್ಟಿದ್ದಾರೆ.

ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷವು, ಅಭ್ಯರ್ಥಿಯ ಆಯ್ಕೆಗಾಗಿ ನಡೆಸಿದ ಮೊದಲ ಚುನಾವಣೆ ಇದು. ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ 81 ವರ್ಷದ ಬೈಡನ್‌, ಶನಿವಾರ ನಡೆದ ಚುನಾವಣೆಯಲ್ಲಿ ಶೇ 96.2 ಮತಗಳನ್ನು ಪ‍ಡೆದರು. ಅವರ ಎದುರಾಳಿ ಮರಿಯಾನ್ ವಿಲಿಯಮ್ಸನ್ ಕೇವಲ ಶೇ 2.1 ಮತಗಳನ್ನು ಗಳಿಸಿದರು.

ಬೈಡನ್‌ ಅವರ ವಯಸ್ಸು ಹಾಗೂ ಯುವ ಮತದಾರರನ್ನು ಸೆಳೆಯುವಲ್ಲಿ ಅವರು ಹೊಂದಿರುವ ಸಾಮರ್ಥ್ಯವು ಪಕ್ಷದೊಳಗೆ ಚರ್ಚೆಯ ವಿಷಯವಾಗಿದೆ. ಆದರೂ ಅವರಿಗೆ ತಕ್ಕ ಪೈಪೋಟಿ ಒಡ್ಡಬಲ್ಲ ಇನ್ನೊಬ್ಬ ಅಭ್ಯರ್ಥಿ ಪಕ್ಷದೊಳಗೆ ಬೆಳೆದು ಬಂದಿಲ್ಲ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಸೌತ್‌ ಕರೊಲಿನಾದಲ್ಲಿ ಫೆಬ್ರುವರಿ 24 ರಂದು ಚುನಾವಣೆ ನಡೆಯಲಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಗೆಲ್ಲುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ. ಕೆಲ ದಿನಗಳ ಹಿಂದೆ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಟ್ರಂಪ್‌ ಅವರು ಭಾರತೀಯ ಮೂಲದ ರಾಜಕಾರಣಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.