
ಗ್ಯಾಬೊರೋನ್: ಆಫ್ರಿಕಾ ಪ್ರವಾಸದ ಕೊನೆಯ ಹಂತವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಬುಧವಾರ) ಬೋಟ್ಸ್‌ವಾನಾಗೆ ಆಗಮಿಸಿದ್ದಾರೆ.
ಮೂರು ದಿನಗಳ ಬೋಟ್ಸ್‌ವಾನಾ ಪ್ರವಾಸ ಕೈಗೊಂಡಿರುವ ಮುರ್ಮು, ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಎಂಟು ಚಿರತೆಗಳನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಅಂಗೋಲಾದ ರಾಜಧಾನಿಯಿಂದ ಹೊರಟ ಮುರ್ಮು, ಬೋಟ್ಸ್‌ವಾನಾ ರಾಜಧಾನಿ ಗ್ಯಾಬೊರೋನ್ ಅಂತರರಾಷ್ಟ್ರೀಯ ವಿಮಾನಕ್ಕೆ ಬಂದಿಳಿದರು.
ರಾಷ್ಟ್ರಪತಿ ಮುರ್ಮು ಅವರನ್ನು ಗೌರವ ವಂದನೆ ಮೂಲಕ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಬೋಟ್ಸ್‌ವಾನಾ ಅಧ್ಯಕ್ಷ ದುಮಾ ಗಿಡೋನ್ ಬೊಕೊ ಬರಮಾಡಿಕೊಂಡರು. ಬೋಟ್ಸ್‌ವಾನಾದ ಸಾಂಪ್ರದಾಯಿಕ ನೃತ್ಯ ಕಲೆಯನ್ನು ಮುರ್ಮು ವೀಕ್ಷಿಸಿದರು.
ಅಂಗೋಲಾದ ಬಳಿಕ ಬೋಟ್ಸ್‌ವಾನಾಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರರಾದರು.
ಬೋಟ್ಸ್‌ವಾನಾ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮುರ್ಮು ಮಾತನಾಡಲಿದ್ದಾರೆ. ಭಾರತೀಯ ಸಮುದಾಯದವರನ್ನು ಭೇಟಿ ಮಾಡುವ ನಿರೀಕ್ಷೆಯೂ ಇದೆ.
ವಜ್ರ, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಇಂಧನ, ಕೃಷಿ, ಆರೋಗ್ಯ, ಔಷಧ, ರಕ್ಷಣೆ, ಇಂಧನ, ಖನಿಜ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ದಿಗೆ ಒತ್ತು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.