ADVERTISEMENT

ಬ್ರಿಟನ್‌– ಚೀನಾ ಬಾಂಧವ್ಯದ ಸುವರ್ಣಯುಗ ಅಂತ್ಯ: ಸುನಕ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:12 IST
Last Updated 29 ನವೆಂಬರ್ 2022, 16:12 IST
   

ಲಂಡನ್‌ (ಪಿಟಿಐ): ಚೀನಾ ಆಡಳಿತವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತವಾದ ಸವಾಲೊಡ್ಡುತ್ತಿರುವುದರಿಂದ ಉಭಯ ರಾಷ್ಟ್ರಗಳಬಾಂಧವ್ಯದ ಸುವರ್ಣ ಯುಗ ಅಂತ್ಯವಾಗಿದೆ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮಂಗಳವಾರ ಘೋಷಿಸಿದರು.

ಲಂಡನ್‌ನ ಲಾರ್ಡ್ ಮೇಯರ್‌ ಔತಣಕೂಟದಲ್ಲಿ ಸೋಮವಾರ ರಾತ್ರಿ ತಮ್ಮ ವಿದೇಶಾಂಗ ನೀತಿಯ ಮೊದಲ ಪ್ರಮುಖ ಭಾಷಣ ಮಾಡಿದ ಅವರು,ಏಷ್ಯಾದ ಅತಿ ದೊಡ್ಡ ಆರ್ಥಿಕತೆಯಲ್ಲಿ ಒಂದೆನಿಸಿದ ಚೀನಾದಲ್ಲಿ, ದಾಖಲೆ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ಟೀಕಿಸಿದರು.

ಜಾಗತಿಕ ವ್ಯವಹಾರಗಳಲ್ಲಿ ಚೀನಾದ ಮಹತ್ವವನ್ನು ಸುಲಭವಾಗಿ ನಿರ್ಲಕ್ಷಿಸಲಾಗದು ಎಂದು ಒಪ್ಪಿಕೊಂಡ ಅವರು, ‘ಚೀನಾ ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲು ಒಡ್ಡುತ್ತಿರುವುದನ್ನು ಮನಗಂಡಿದ್ದೇವೆ. ಅದು ಹೆಚ್ಚಿನ ಸರ್ವಾಧಿಕಾರದತ್ತ ಸಾಗುತ್ತಿರುವಾಗ, ಆ ಸವಾಲು ಇನ್ನಷ್ಟ ತೀವ್ರವಾಗಿ ಬೆಳೆಯುತ್ತದೆ. ಇದು ಸ್ಪಷ್ಟ. ಈ ಹಿಂದೆ ಉಭಯ ದೇಶಗಳ ಸಂಬಂಧವನ್ನು ಸುವರ್ಣಯುಗವೆಂದು ಕರೆಯುತ್ತಿದ್ದುದು ಕೊನೆಗೊಂಡಿದೆ’ ಎಂದರು.

ADVERTISEMENT

ಚೀನಾದಲ್ಲಿವಾರಾಂತ್ಯ ನಡೆದ ನಾಗರಿಕರ ಬೃಹತ್‌ ಪ್ರತಿಭಟನೆ ವೇಳೆ ವರದಿ ಮಾಡುತ್ತಿದ್ದ ಬಿಬಿಸಿ ಪತ್ರಕರ್ತನನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದ ಸುನಕ್‌, ಜನರ ಶಾಂತಿಯುತ ಪ್ರತಿಭಟನೆ ನಿಭಾಯಿಸುವಲ್ಲಿ ಚೀನಾ ಸರ್ಕಾರ ವಿಫಲವಾಗಿದೆ.ಜನರ ಕಳವಳ ಆಲಿಸದೆ, ಮತ್ತಷ್ಟು ಬಿರುಕು ಮೂಡಿಸುವ ಮಾರ್ಗವನ್ನು ಅದು ಹಿಡಿದಿದೆ ಎಂದು ಟೀಕಿಸಿದರು.

ಭಾರತದೊಂದಿಗೆ ಹೊಸ ಎಫ್‌ಟಿಎ ಒಪ್ಪಂದಕ್ಕೆ ಬದ್ಧ:

ಇಂಡೊ- ಪೆಸಿಫಿಕ್ ಪ್ರದೇಶದೊಂದಿಗಿನ ಸಂಬಂಧ ಹೆಚ್ಚಿಸುವ ಸಲುವಾಗಿ ಭಾರತದ ಜತೆಗೆ ಹೊಸದಾಗಿ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾಡಿಕೊಳ್ಳಲು ಬ್ರಿಟನ್ ಬದ್ಧವಾಗಿದೆ ಎಂದು ರಿಷಿ ಸುನಕ್‌ ಇದೇ ವೇಳೆ ಪುನರುಚ್ಚರಿಸಿದರು.

ಯುರೋಪ್‌ ಮತ್ತು ಉತ್ತರ ಅಮೆರಿಕಕ್ಕೆ ಹೋಲಿಸಿದರೆ 2050ರ ವೇಳೆಗೆ ಭಾರತ– ಪೆಸಿಫಿಕ್‌ ಜಾಗತಿಕ ಬೆಳವಣಿಗೆ ಅರ್ಧದಷ್ಟನ್ನು ಸಾಧಿಸಲಿದೆ. ಹೀಗಾಗಿಟ್ರಾನ್ಸ್- ಪೆಸಿಫಿಕ್ ವ್ಯಾಪಾರ ಒಪ್ಪಂದಕ್ಕೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

‘2050ರ ವೇಳೆಗೆ ಇಂಡೊ-ಪೆಸಿಫಿಕ್‌, ಜಾಗತಿಕ ಬೆಳವಣಿಗೆಯ ಅರ್ಧದಷ್ಟು ಸಾಧಿಸಲಿದೆ. ಅದಕ್ಕಾಗಿಯೇ ನಾವು ಭಾರತ ಮತ್ತು ಇಂಡೊನೇಷ್ಯಾದ ಜತೆಗೆ ಹೊಸ ಎಫ್‌ಟಿಎ ಮಾಡಿಕೊಳ್ಳಲಿದ್ದೇವೆ. ಆ ಮೂಲಕಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಒಪ್ಪಂದ ಸಿಪಿಟಿಪಿಪಿಗೆ ನಾವು ಸೇರುತ್ತಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.