ADVERTISEMENT

ಹಾಂಗ್‌ಕಾಂಗ್: ಪ್ರತಿಭಟನೆ ತೀವ್ರ

ಬೀದಿಗಿಳಿದ ಪ್ರಜಾಪ್ರಭುತ್ವ ಪರ ಶಿಕ್ಷಕರು– ಚೀನಾ ಪರ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:15 IST
Last Updated 17 ಆಗಸ್ಟ್ 2019, 20:15 IST
ಹಾಂಗ್‌ಕಾಂಗ್‌ನ ತಮರ್‌ ಉದ್ಯಾನದ ಎದುರು ಶನಿವಾರ ಚೀನಾ ಬೆಂಬಲಿತ ನಾಗರಿಕರು ‘ಹಾಂಗ್‌ಕಾಂಗ್ ರಕ್ಷಿಸಿ’ ಎಂಬ ಘೋಷಣೆಯ ಬ್ಯಾನರ್‌ ಮತ್ತು ಚೀನಾ ಬಾವುಟ ಹಿಡಿದು ಸಾಗಿದರು –ರಾಯಿಟರ್ಸ್ ಚಿತ್ರ
ಹಾಂಗ್‌ಕಾಂಗ್‌ನ ತಮರ್‌ ಉದ್ಯಾನದ ಎದುರು ಶನಿವಾರ ಚೀನಾ ಬೆಂಬಲಿತ ನಾಗರಿಕರು ‘ಹಾಂಗ್‌ಕಾಂಗ್ ರಕ್ಷಿಸಿ’ ಎಂಬ ಘೋಷಣೆಯ ಬ್ಯಾನರ್‌ ಮತ್ತು ಚೀನಾ ಬಾವುಟ ಹಿಡಿದು ಸಾಗಿದರು –ರಾಯಿಟರ್ಸ್ ಚಿತ್ರ   

ಹಾಂಗ್‌ಕಾಂಗ್: ಪ್ರಜಾಪ್ರಭುತ್ವ ಪರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ನಡುವೆ, ಚೀನಾ ನಿಲುವಿಗೆ ಬೆಂಬಲಿಸಿ ಸರ್ಕಾರಿ ನೌಕರರು ಸಹ ನಗರದಲ್ಲಿ ಬೀದಿಗಿಳಿದರು. ಇನ್ನೊಂದೆಡೆ, ಪ್ರಜಾಪ್ರಭುತ್ವ ಪರ ಹೋರಾಟ ನಡೆಸುವವರಿಗೆ ಶಿಕ್ಷಕರು ಸಹ ಬೆಂಬಲ ನೀಡಿದ ಪರಿಣಾಮ ಹಲವು ಹೋರಾಟಗಳಿಗೆ ಹಾಂಗ್‌ಕಾಂಗ್‌ ಶನಿವಾರ ಸಾಕ್ಷಿಯಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ಶಿಕ್ಷಕರು ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಮನವಿ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನವೂ ನಡೆಯಿತು. ‘ಮುಂದಿನ ಜನಾಂಗವನ್ನು ರಕ್ಷಿಸಿ’ ಎನ್ನುವ ಬೋರ್ಡ್‌ಗಳು ಮತ್ತು ಕೊಡೆಗಳನ್ನು ಪ್ರದರ್ಶಿಸಿದರು.

‘ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಇದ್ದಾರೆ. ಅವರಿಗೆ ಬಂಬಲ ಸೂಚಿಸಲು ನಾವು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ’ ಎಂದು ಶಾಲಾ ಶಿಕ್ಷಕರೊಬ್ಬರು ತಿಳಿಸಿದರು.

ADVERTISEMENT

‘ಸರ್ಕಾರ ಪ್ರತಿಭಟನಕಾರರ ಬೇಡಿಕೆಗಳಿಗೆ ಸ್ಪಂದಿಸಬೇಕು ಮತ್ತು ಪ್ರತಿಭಟನಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ತಡೆಯಬೇಕು’ ಎಂದು ಶಿಕ್ಷಕರು ಒತ್ತಾಯಿಸಿದರು.

ಸರ್ಕಾರಿ ನೌಕರರು, ಚೀನಾದ ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದರಲ್ಲದೇ, ಪೊಲೀಸರಿಗೆ ಬೆಂಬಲ ಸೂಚಿಸಿದರು.

ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಪ್ರತಿಭಟನೆ 10ನೇ ವಾರಕ್ಕೆ ತಲುಪಿದೆ.

ಚೀನಾ ಭದ್ರತಾ ಪಡೆಗಳ ಪಥಸಂಚಲನ

ಶೆಂಜೆನ್ : ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ನಡೆಯುತ್ತಿರುವ ಹೋರಾಟ 10ನೇ ವಾರಕ್ಕೆ ಕಾಲಿಟ್ಟಿದ್ದು, ಶನಿವಾರ ಚೀನಾದ ಭದ್ರತಾ ಪಡೆಗಳು ಪಥಸಂಚಲನ ಮತ್ತು ಗುಂಪು ನಿಯಂತ್ರಣ ತಂತ್ರಗಳ ಅಭ್ಯಾಸ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.