ADVERTISEMENT

ಪುಟಿನ್ ಮನೆ ಮೇಲೆ ಉಕ್ರೇನ್‌ನಿಂದ ಡ್ರೋನ್ ದಾಳಿ: ರಷ್ಯಾದಿಂದ ವಿಡಿಯೊ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 5:54 IST
Last Updated 1 ಜನವರಿ 2026, 5:54 IST
Venugopala K.
   Venugopala K.

ಮಾಸ್ಕೊ: ಶಾಂತಿ ಮಾತುಕತೆ ನಡುವೆ ಉಕ್ರೇನ್ ಡ್ರೋನ್‌ಗಳ ಮೂಲಕ ದಾಳಿ ಮಾಡಿದ್ದು, ರಷ್ಯಾ ಮತ್ತು ಕ್ರೈಮಿಯಾದ ಹಲವಾರು ಭಾಗಗಳಿಗೆ ಅಪ್ಪಳಿಸಿದೆ ಎಂದು ರಷ್ಯಾ ಆರೋಪಿಸಿತ್ತು, ಇದರ ಬೆನ್ನಲ್ಲೇ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ಪದೇ ಪದೇ ದಾಳಿ ನಡೆಸಿದೆ ಎನ್ನಲಾದ ವಿಡಿಯೊ ಹರಿದಾಡುತ್ತಿದೆ.

ಕ್ರೆಮ್ಲಿನ್ ಬಿಡುಗಡೆ ಮಾಡಿದ ಮತ್ತೊಂದು ವಿಡಿಯೊದಲ್ಲಿ, ಪುಟಿನ್ ಅವರ ನಿವಾಸದ ಮೇಲಿನ ದಾಳಿಯಲ್ಲಿ ಬಳಸಲಾದ ಮತ್ತು ರಷ್ಯಾ ಹೊಡೆದು ಉರುಳಿಸಿರುವ ಡ್ರೋನ್‌ ಒಂದು 6 ಕೆ.ಜಿ ಸ್ಫೋಟಕ ಹೊತ್ತಿರುವುದನ್ನು ತೋರಿಸಲಾಗಿದೆ.

ಹೊಸ ವರ್ಷದ ಮುನ್ನಾದಿನದಂದು ಪುಟಿನ್ ಅವರ ನಿವಾಸದ ಮೇಲೆ ನಡೆದ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಹ ಕಳವಳ ವ್ಯಕ್ತಪಡಿಸಿದ್ದರು. ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ನಡೆಯುತ್ತಿರುವ ಪ್ರಯತ್ನಗಳ ಮೇಲೆ ಎಲ್ಲರೂ ಗಮನಹರಿಸಬೇಕೆಂದು ಒತ್ತಾಯಿಸಿದ್ದರು.

ADVERTISEMENT

‘ರಷ್ಯಾದ ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ವರದಿಗಳನ್ನು ಕೇಳಿ ತೀವ್ರ ಕಳವಳಗೊಂಡಿದ್ದೇನೆ. ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸಲು ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವನ್ನು ನೀಡುತ್ತವೆ. ಈ ಪ್ರಯತ್ನಗಳ ಮೇಲೆ ಗಮನಹರಿಸಲು ಮತ್ತು ಅವುಗಳನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ತಪ್ಪಿಸಲು ನಾವು ಸಂಬಂಧಪಟ್ಟ ಎಲ್ಲರನ್ನೂ ಒತ್ತಾಯಿಸುತ್ತೇವೆ’ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಮಧ್ಯೆ, ಮೋದಿ ಮತ್ತು ಇತರ ದೇಶಗಳ ನಾಯಕರು ವ್ಯಕ್ತಪಡಿಸಿದ ಕಳವಳ ಕುರಿತಂತೆ ಪ್ರತಿಕ್ರಿಯಿಸಿರುವ ಉಕ್ರೇನ್, ರಷ್ಯಾ ಆರೋಪ ಸುಳ್ಳು ಮತ್ತು ಅಧಾರರಹಿತ ಎಂದಿದೆ.

ರಷ್ಯಾ ಅಧ್ಯಕ್ಷರ ನಿವಾಸದ ಮೇಲೆ ಉಕ್ರೇನ್‌ನಿಂದ ಯಾವುದೇ ದಾಳಿ ನಡೆದಿಲ್ಲ. ದಾಳಿ ಕುರಿತ ರಷ್ಯಾ ಹೇಳಿಕೆ ಸುಳ್ಳು. ಈ ಕುರಿತಂತೆ ರಷ್ಯಾ ಯಾವುದೇ ವಸ್ತುನಿಷ್ಠ ಪುರಾವೆ ನೀಡಿಲ್ಲ ಎಂದು ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿಲ್ ಸಿಬಿಹಾ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಭಾರತ, ಪಾಕಿಸ್ತಾನ ಮತ್ತು ಇತರ ದೇಶಗಳು ಕಳವಳ ವ್ಯಕ್ತಪಡಿಸಿರುವುದು ದುರದೃಷ್ಟಕರ ಎಂದಿದ್ದಾರೆ.

ಮಾಸ್ಕೊ ಮತ್ತು ಸೇಂಟ್ ಪೀಟರ್ಸ್‌ಬರ್ಗ್ ನಡುವೆ ಇರುವ ನವ್‌ಗೊರೊಡ್ ಪ್ರದೇಶದಲ್ಲಿನ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು 91 ಡ್ರೋನ್‌ಗಳನ್ನು ಬಳಸಿ ಉಕ್ರೇನ್ ದಾಳಿ ನಡೆಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ದೂಷಿಸಿದ್ದರು. ಅಲ್ಲದೆ, ವಾಯು ರಕ್ಷಣಾ ವ್ಯವಸ್ಥೆಯಿಂದ ಅವುಗಳನ್ನು ತಡೆಹಿಡಿಯಲಾಗಿದೆ ಎಂದೂ ಹೇಳಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ಹಳಿ ತಪ್ಪಿಸಲು ರಷ್ಯಾ ನಡೆಸುತ್ತಿರುವ ಸಂಘಟಿತ ಪಿತೂರಿ ಎಂದು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.