ADVERTISEMENT

ಅಜರ್‌ಬೈಜಾನ್‌ ವಿಮಾನ ಪತನಕ್ಕೆ ನಾವೇ ಕಾರಣ: ಪುಟಿನ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:43 IST
Last Updated 9 ಅಕ್ಟೋಬರ್ 2025, 14:43 IST
ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಆಲಿಯೇವ್‌ ಅವರನ್ನು ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ ಅವರು ಗುರುವಾರ ಭೇಟಿ ಮಾಡಿ ಚರ್ಚಿಸಿದರು –ಎಎಫ್‌ಪಿ ಚಿತ್ರ
ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಆಲಿಯೇವ್‌ ಅವರನ್ನು ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ ಅವರು ಗುರುವಾರ ಭೇಟಿ ಮಾಡಿ ಚರ್ಚಿಸಿದರು –ಎಎಫ್‌ಪಿ ಚಿತ್ರ   

ಮಾಸ್ಕೊ: ‘ಕಳೆದ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಅಜರ್‌ಬೈಜಾನ್‌ ವಿಮಾನ ಪತನದಲ್ಲಿ ನಮ್ಮ ಪಾತ್ರವಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ‍ಪುಟಿನ್‌ ಅವರು ಇದೇ ಮೊದಲ ಬಾರಿಗೆ ಗುರುವಾರ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅವರು ಈ ಘಟನೆಯನ್ನು ‘ದುರಂತ’ ಎಂದು ಕರೆದು ಕ್ಷಮೆಯಾಚಿಸಿದ್ದರೇ ಹೊರತು ತಪ್ಪೊಪ್ಪಿಕೊಂಡಿರಲಿಲ್ಲ.

ತಜಕಿಸ್ತಾನದಲ್ಲಿ ನಡೆಯುತ್ತಿರುವ ರಷ್ಯಾ–ಸೆಂಟ್ರಲ್‌ ಏಷ್ಯಾ ಶೃಂಗಸಭೆಯಲ್ಲಿ ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಆಲಿಯೇವ್‌ ಅವರೊಂದಿಗಿನ ಭೇಟಿಯ ವೇಳೆ ಪುಟಿನ್‌ ಅವರು ದುರಂತದಲ್ಲಿನ ತಮ್ಮ ದೇಶದ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. 67 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವು ಕಜಕಸ್ತಾನದಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ 38 ಮಂದಿ ಮೃತಪಟ್ಟಿದ್ದರು.

‘ಉಕ್ರೇನ್‌ ಡ್ರೋನ್‌ಗಳನ್ನು ಗುರಿಯಾಗಿಸಿ ನಾವು ಎರಡು ಕ್ಷಿಪಣಿಗಳನ್ನು ನಿಯೋಜಿಸಿದ್ದೆವು. ಆದರೆ, ವಿಮಾನಕ್ಕೆ ತುಸು ಹತ್ತಿರದಲ್ಲಿಯೇ ಆ ಕ್ಷಿಪಣಿಗಳು ಸ್ಫೋಟಗೊಂಡವು. ನಮ್ಮ ಕ್ಷಿಪಣಿಗಳು ನೇರವಾಗಿ ನಿಮ್ಮ ವಿಮಾನಕ್ಕೆ ಹೊಡೆದಿಲ್ಲ. ಹಾಗೇನಾದರೂ ಆಗಿದ್ದರೆ ವಿಮಾನವು ಅಲ್ಲಿಯೇ ಸ್ಫೋಟಗೊಳ್ಳುತ್ತಿತ್ತು’ ಎಂದು ಆಲಿಯೇವ್‌ ಅವರಿಗೆ ಪುಟಿನ್‌ ವಿವರಿಸಿದರು.

ADVERTISEMENT

‘ನಮ್ಮ ನೆಲದಲ್ಲಿಯೇ ವಿಮಾನ ಇಳಿಸಿ ಎಂದು ನಾವು ಪೈಲಟ್‌ಗೆ ಹೇಳಿದೆವು. ಆದರೆ, ಅವರು ತಮ್ಮ ದೇಶದಲ್ಲಿಯೇ ವಿಮಾನ ಇಳಿಸಲು ಯತ್ನಿಸಿದರು. ಆಮೇಲೆ ಕಜಕಸ್ತಾನದಲ್ಲಿ ಅದು ಪತನಗೊಂಡಿತು. ಪರಿಹಾರ ನೀಡುವ ಸಂಬಂಧ ರಷ್ಯಾವು ಎಲ್ಲ ರೀತಿಯ ಸಹಕಾರ ಒದಗಿಸಲು ಸಿದ್ಧವಿದೆ’ ಎಂದರು.

‘ವಿಮಾನ ದುರಂತಕ್ಕೆ ರಷ್ಯಾವೇ ಕಾರಣ’ ಎಂದು ಆಲಿಯೇವ್‌ ಅವರು ಈ ಹಿಂದೆ ಆರೋಪಿಸಿದ್ದರು. ಘಟನೆಯ ಸಂಪೂರ್ಣ ವಿವರ ನೀಡಿದ ಬಳಿಕ ಆಲಿಯೇವ್‌ ಅವರು ಪುಟಿನ್‌ ಅವರಿಗೆ ಗುರುವಾರ ಧನ್ಯವಾದ ತಿಳಿಸಿದರು. ‘ಪಕ್ಷಿಯನ್ನು ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ವಿಮಾನ ಅಪಘಾತವಾಗಿದೆ’ ಎಂದು ಈ ಹಿಂದೆ ರಷ್ಯಾ ವಾಯು ಸಂಚಾರ ಸಂಸ್ಥೆಯು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.