ADVERTISEMENT

ಪುಟಿನ್‌ಗೆ ಕ್ಯಾನ್ಸರ್, ಅಧಿಕಾರ ಹಸ್ತಾಂತರ ಸಾಧ್ಯತೆ: ಅಮೆರಿಕ ಮಾಧ್ಯಮ ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2022, 7:14 IST
Last Updated 3 ಮೇ 2022, 7:14 IST
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್   

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಹೀಗಾಗಿ, ತಾತ್ಕಾಲಿಕವಾಗಿ ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ನ್ಯೂಯಾರ್ಕ್ ಪೋಸ್ಟ್‌ನ ವರದಿ ಹೇಳಿದೆ.

ಪುಟಿನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ ಎಂದು ರಷ್ಯಾದ ಮಾಜಿ ವಿದೇಶಿ ಗುಪ್ತಚರ ಸೇವೆಯ ಲೆಫ್ಟಿನೆಂಟ್ ಜನರಲ್ ಅವರ ಟೆಲಿಗ್ರಾಮ್ ಚಾನೆಲ್ ಅನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ನಿರೀಕ್ಷಿತ ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಯು ಪುಟಿನ್ ಅವರನ್ನು 'ಸ್ವಲ್ಪ ಸಮಯದವರೆಗೆ' ಅಧಿಕಾರದಿಂದ ದೂರ ಉಳಿಯುವಂತೆ ಮಾಡುತ್ತದೆ ಎಂದು ವರದಿ ಹೇಳಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಪುಟಿನ್ ಅವರ 'ಅನಾರೋಗ್ಯಕರ ನೋಟ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಅವರ ಅಸಾಧಾರಣ ಚಡಪಡಿಕೆಯ ವರ್ತನೆ'ಯನ್ನು ಉಲ್ಲೇಖಿಸಿರುವ ನ್ಯೂಯಾರ್ಕ್ ಪೋಸ್ಟ್, ರಷ್ಯಾದ ಅಧ್ಯಕ್ಷರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳಿವೆ ಎಂದು ಹೇಳಿದೆ.

ಆದಾಗ್ಯೂ, ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಸೋಮವಾರ, 'ಈ ವರದಿಯನ್ನು ದೃಢೀಕರಿಸುವ ಯಾವುದನ್ನೂ ನಾವು ನೋಡಿಲ್ಲ' ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಪುಟಿನ್, ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ ಎರಡು ಗಂಟೆಗಳ ಕಾಲ ತುಂಬಾ ಆತ್ಮೀಯವಾದ ಸಂಭಾಷಣೆ ನಡೆಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿಯು ಟೆಲಿಗ್ರಾಮ್ ಪೋಸ್ಟ್ ಅನ್ನು ಉಲ್ಲೇಖಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.