ADVERTISEMENT

ಗಾಜಾಪಟ್ಟಿ | ಕದನ ವಿರಾಮ ಘೋಷಣೆ: ಒಪ್ಪಂದಕ್ಕೆ ಇಸ್ರೇಲ್‌ ಸಂಪುಟ ಅಸ್ತು

ಏಜೆನ್ಸೀಸ್
Published 18 ಜನವರಿ 2025, 14:07 IST
Last Updated 18 ಜನವರಿ 2025, 14:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೈರೊ, ಜೆರುಸಲೇಂ: ಕದನ ವಿರಾಮ ಘೋಷಿಸಲು ಇಸ್ರೇಲ್‌ ಸೇನೆ ಮತ್ತು ಹಮಾಸ್ ಬಂಡುಕೋರರ ಸಂಘಟನೆ ಸಮ್ಮತಿಸಿವೆ. ಕದನ ವಿರಾಮ ಸ್ಥಳೀಯ ಕಾಲಮಾನ ಭಾನುವಾರ ಬೆಳಿಗ್ಗೆ 6.30ರಿಂದ (ಭಾರತೀಯ ಕಾಲಮಾನ ಶನಿವಾರ ರಾತ್ರಿ 12ಗಂಟೆ) ಜಾರಿಗೆ ಬರಲಿದೆ.

ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಕುರಿತು ಉಭಯತ್ರರ ನಡುವೆ ಮೂಡಿದ್ದ ಒಡಂಬಡಿಕೆಗೆ ಇಸ್ರೇಲ್‌ನ ಸಚಿವ ಸಂಪುಟವು ಅನುಮೋದನೆ ನೀಡಿತು. ಮಾತುಕತೆಗೆ ಕತಾರ್ ಮಧ್ಯಸ್ಥಿಕೆ ವಹಿಸಿತ್ತು.

ADVERTISEMENT

ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಅವಧಿ ನಡೆದ ಭೀಕರ, ಗಂಭೀರ ಸ್ವರೂಪದ ಯುದ್ಧವು, 15 ತಿಂಗಳ ತರುವಾಯ ತಾತ್ಕಾಲಿಕವಾಗಿ ಅಂತ್ಯಗೊಂಡಂತಾಗಿದೆ.

ಒಡಂಬಡಿಕೆಯ ಪ್ರಕಾರ, ಹಮಾಸ್ ಬಂಡುಕೋರರು ಮುಂದಿನ ಆರು ವಾರಗಳಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವರು. ಪ್ರತಿಯಾಗಿ, ಇಸ್ರೇಲ್‌ ಸೇನೆಯು ತಾನು ಸೆರೆ ಇಟ್ಟುಕೊಂಡಿರುವ ಪ್ಯಾಲೆಸ್ಟೀನ್‌ನ ನೂರಾರು ಯುದ್ಧ ಕೈದಿಗಳ ಬಿಡುಗಡೆ ಮಾಡಲಿದೆ.

ಉಳಿದಂತೆ, ಪುರುಷ ಕೈದಿಗಳು ಎರಡನೇ ಹಂತದಲ್ಲಿ ಬಿಡುಗಡೆ ಆಗುವರು. ಈ ಕುರಿತು ಮೊದಲ ಹಂತದ ಬಿಡುಗಡೆ ಬಳಿಕ ಮಾತುಕತೆ ನಡೆಯಲಿದೆ. 

ಇಸ್ರೇಲ್‌, ತನ್ನ ಸೇನೆಯನ್ನು ಪೂರ್ಣ ವಾಪಸು ಕರೆಯಿಸಿಕೊಳ್ಳದ ಮತ್ತು ದಾಳಿ ನಿಲ್ಲದ  ಹೊರತಾಗಿ ಉಳಿದ ಒತ್ತೆಯಾಳುಗಳ ಬಿಡುಗಡೆ ಮಾಡುವುದಿಲ್ಲ ಎಂದು ಹಮಾಸ್ ಹೇಳಿದೆ. 

ಒಡಂಬಡಿಕೆ ಪ್ರಕಾರ, ಹಮಾಸ್ ಬಂಡುಕೋರರು ಮೊದಲ ದಿನ ಮೂವರು ಮಹಿಳಾ ಒತ್ತೆಯಾಳುಗಳು, 7ನೇ ದಿನ ನಾಲ್ವರು, ಮುಂದಿನ ಐದು ವಾರಗಳಲ್ಲಿ 26 ಮಂದಿಯನ್ನು ಬಿಡುಗಡೆ ಮಾಡುವರು. ಇದೇ ಅವಧಿಯಲ್ಲಿ ಪ್ಯಾಲೆಸ್ಟೀನ್ ಕೈದಿಗಳ ಬಿಡುಗಡೆ ಆಗಲಿದ್ದು, ಮೊದಲಿಗೆ ಬಿಡುಗಡೆ ಆಗುವವರಲ್ಲಿ ಯುವಜನರು, ಮಹಿಳೆಯರು ಸೇರಿದ್ದಾರೆ. 

ಅಕ್ಟೋಬರ್ 7, 2023ರಂದು ಹಮಾಸ್ ಬಂಡುಕೋರರು ಇಸ್ರೇಲ್‌ ಗುರಿಯಾಗಿಸಿ ಅಪ್ರಚೋದಿತ ದಾಳಿ ನಡೆಸಿದ್ದು, ಯುದ್ಧದ ಕಿಡಿ ಹೊತ್ತಿಸಿತ್ತು. ಆ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,200 ಮಂದಿ ಸತ್ತಿದ್ದರು. 250 ಜನರನ್ನು ಒತ್ತೆಯಾಳಾಗಿ ಕರೆದೊಯ್ಯಲಾಗಿತ್ತು. 

ಪ್ರತಿಯಾಗಿ ಹಿಂದೆಯೇ ಇಸ್ರೇಲ್‌ ಸೇನೆಯು ಹಮಾಸ್‌ ಬಂಡುಕೋರರ ನೆಲೆ ಗುರಿಯಾಗಿಸಿ ಗಾಜಾಪಟ್ಟಿಯ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇದುವರೆಗೂ, ಈ ದಾಳಿಗೆ ಅಧಿಕೃತ ಮಾಹಿತಿ ಪ್ರಕಾರ 46,000 ಪ್ಯಾಲೆಸ್ಟೀನಿಯರು ಸತ್ತಿದ್ದಾರೆ. ಭಾರಿ ಆಸ್ತಿ ಹಾನಿ ಸಂಭವಿಸಿದೆ.

ಇಸ್ರೇಲ್‌ನಿಂದ 700 ಕೈದಿಗಳ ಪಟ್ಟಿ ಬಿಡುಗಡೆ 

*ಇಸ್ರೇಲ್‌ನಿಂದ ಮೊದಲ ಹಂತದಲ್ಲಿ ಬಿಡುಗಡೆ ಆಗುವ ಪ್ಯಾಲೆಸ್ಟೀಯನ್‌ನ 700 ಕೈದಿಗಳ ಪಟ್ಟಿ ಬಿಡುಗಡೆ.  

*ಈ ಪಟ್ಟಿಯಲ್ಲಿ ಹಮಾಸ್, ಇಸ್ಲಾಮಿಕ್ ಬಂಡುಕೋರ ಸಂಘಟನೆಗಳ ಸದಸ್ಯರು, ಸಜೆಗೆ ಒಳಗಾದವರು. ಆದರೆ, ವೆಸ್ಟ್‌ಬ್ಯಾಂಕ್‌ನ ನಾಯಕ, 64ವರ್ಷದ ಮಾರ್ವಾನ್ ಬಾರ್ಗೌಟಿ ಹೆಸರಿಲ್ಲ. ಇವರ ಬಿಡುಗಡೆಗೂ ಹಮಾಸ್‌ ಬಂಡುಕೋರರು ಪ್ರಮುಖ ಬೇಡಿಕೆ ಇಟ್ಟಿದ್ದರು.   

*ಸದ್ಯ ಗಾಜಾಪಟ್ಟಿಯಿಂದ ಇಸ್ರೇಲ್‌ ಸೇನೆ ಹಿಂದೆ ಸರಿಯಲಿದೆ. ಇದು,
ಪ್ಯಾಲೆಸ್ಟೀನಿಯರು ತಮ್ಮ ಮನೆಗಳಿಗೆ ಮರಳಲು ಆಸ್ಪದವಾಗಲಿದೆ. 

*ಸೇನೆ ನೆಲೆಯೂರಿರುವ ಕಡೆ ನಿವಾಸಿಗಳು ಮರಳಲು ಸದ್ಯ ಅವಕಾಶ ಇಲ್ಲ. ಕದನವಿರಾಮ ಘೋಷನೆ ಹಿಂದೆಯೇ ಇಸ್ರೇಲ್‌ ಪಡೆ ಗುರಿಯಾಗಿಸಿ ನಡೆಯುವ ಬೆದರಿಕೆ ಯತ್ನಗಳಿಗೆ ‘ತಕ್ಕ ಉತ್ತರ’ ಸಿಗಲಿದೆ ಎಂದು ಸೇನೆ ಎಚ್ಚರಿಕೆ.

ಬಿಡುಗಡೆಯಾಗುವ ಒತ್ತೆಯಾಳುಗಳ ಸ್ವಾಗತಕ್ಕೆ ವಿಶೇಷ ಕಾರ್ಯಪಡೆ ಕ್ರಮವಹಿಸಬೇಕು ಮತ್ತು ಅವರ ಕುಟುಂಬ ಸದಸ್ಯರಿಗೂ ಒಪ್ಪಂದ ಕುರಿತು ಮಾಹಿತಿ ನೀಡಬೇಕು
ಬೆಂಜಮಿನ್ ನೇತನ್ಯಾಹು, ಇಸ್ರೇಲ್‌ ಪ್ರಧಾನಿ
ಕದನ ವಿರಾಮ ಭಾನುವಾರ ಬೆಳಿಗ್ಗೆಯಿಂದ ಜಾರಿಗೆ ಬರಲಿದೆ. ಗಾಜಾಪಟ್ಟಿಯಲ್ಲಿ ಜನತೆ ಹೆಚ್ಚು ಜಾಗ್ರತೆ ವಹಿಸಬೇಕು. ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸಬೇಕು.
ಮಾಜಿಸ್‌ ಅಲ್‌ ಅನ್ಸಾರಿ, ವಿದೇಶಾಂಗ ಸಚಿವ, ಕತಾರ್
ಕದನ ವಿರಾಮ ಘೋಷಣೆ ಸ್ವಾಗತಾರ್ಹ. ನ. 27ರ ಬಳಿಕ ಇಸ್ರೆಲ್‌ನ ಸೇನೆ ನೂರಾರು ಬಾರಿ ಯುದ್ಧದ ನಿಯಮ ಉಲ್ಲಂಘಿಸಿದೆ. ನಮ್ಮ ತಾಳ್ಮೆ ಪರೀಕ್ಷಿಸಬಾರದು
ನಯೀಂ ಕಾಸ್ಸೆಂ, ಹೆಜ್ಬುಲ್ಲಾ ನಾಯಕ, ಲೆಬನಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.